ಮುಸ್ಲಿಮರಿಗೆ 2ಬಿ ಮೀಸಲಾತಿ ರದ್ದು | ಕಾನೂನು ಹೋರಾಟಕ್ಕೆ ವಕ್ಫ್ ಬೋರ್ಡ್ ನೆರವು: ಮೌಲಾನ ಶಾಫಿ ಸಅದಿ
ಬೆಂಗಳೂರು, ಮಾ.25: ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ‘2ಬಿ’ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿ, ಲಿಂಗಾಯತ ಹಾಗೂ ಒಕ್ಕಲಿಗರಿಗೆ ಹಂಚಿಕೆ ಮಾಡಿದೆ. ಈ ವಿಚಾರದಲ್ಲಿ ನಿನ್ನೆ ರಾತ್ರಿಯಿಂದಲೂ ಮುಸ್ಲಿಮ್ ಮುಖಂಡರು ಚರ್ಚೆಗಳನ್ನು ನಡೆಸುತ್ತಿದ್ದಾರೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದರು.
ಶನಿವಾರ ನಗರದ ಟ್ಯಾನರಿ ರಸ್ತೆಯಲ್ಲಿರುವ ಮಸ್ಜಿದೆ ಬಿಲಾಲ್ನಲ್ಲಿ ಕರ್ನಾಟಕ ಸುನ್ನಿ ಉಲಮಾ ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮುದಾಯದ ಆತಂಕದ ಬಗ್ಗೆ ಸರಕಾರದ ಗಮನ ಸೆಳೆದು, ಆದಷ್ಟು ಬೇಗ 2 ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿ ಕೈಬಿಟ್ಟಿರುವ ನಿರ್ಧಾರವನ್ನು ಹಿಂಪಡೆಯಲು ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ಯಾವುದೆ ಕಾರಣಕ್ಕೂ ಸಚಿವ ಸಂಪುಟದ ತೀರ್ಮಾನ ಅಧಿಸೂಚನೆ ರೂಪದಲ್ಲಿ ಹೊರಬರದಂತೆ ತಡೆಯಬೇಕು ಎಂದು ಉಲಮಾಗಳು ಕೋರಿದ್ದಾರೆ ಎಂದು ಶಾಫಿ ಸಅದಿ ತಿಳಿಸಿದರು.
ಈ ಸಂಬಂಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಜೊತೆ ನಿನ್ನೆ ರಾತ್ರಿ ಮಾತನಾಡಿದ್ದೇನೆ. ಅವರು ಹಲವು ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. 2ಬಿಯಿಂದ ತೆಗೆದು ಹಾಕಿದರೂ, ‘ಇಡಬ್ಲ್ಯುಎಸ್’ನಲ್ಲಿ ಅವಕಾಶ ಕಲ್ಪಿಸಿರುವುದಾಗಿ ಹೇಳಿದ್ದಾರೆ. ಆದರೆ, ಸರಕಾರದ ತೀರ್ಮಾನವನ್ನು ನಮ್ಮ ಕಾನೂನು ತಜ್ಞರು ಒಪ್ಪುತ್ತಿಲ್ಲ. ಸರಕಾರ ನಮ್ಮನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ಹೇಳಿದರು.
‘ಇಡಬ್ಲ್ಯುಎಸ್’ ನಲ್ಲಿ ಮುಕ್ತ ಅವಕಾಶ ಇದೆ. ಅದರಲ್ಲಿ ಬ್ರಾಹ್ಮಣರು, ವೈಶ್ಯ, ಜೈನರಂತಹ ಬಲಾಢ್ಯ ಸಮುದಾಯದವರೊಂದಿಗೆ ನಾವು ಸ್ಪರ್ಧೆ ಮಾಡಲು ಆಗಲ್ಲ. ಅಲ್ಲದೆ, ಶೇ.10ರಷ್ಟು ಇರುವ ಇಡಬ್ಲ್ಯುಎಸ್ ಕೋಟಾದಲ್ಲಿ ನಿಗದಿತವಾಗಿ ಮುಸ್ಲಿಮರಿಗೆ ಇಷ್ಟು ಪ್ರಮಾಣದಲ್ಲಿ ಮೀಸಲಾತಿ ಇದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ ಎಂದು ಶಾಫಿ ಸಅಅದಿ ತಿಳಿಸಿದರು.
ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದಿರುವ ಆಧಾರದಲ್ಲಿ 2ಬಿ ಅಡಿಯಲ್ಲಿ ಪ್ರತ್ಯೇಕವಾಗಿ ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಈಗ ಸರಕಾರ ಆರ್ಥಿಕವಾಗಿ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ನೀಡಲು ಬಯಸಿದೆ. ಸರಕಾರದ ಈ ತೀರ್ಮಾನವನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಹಿಂದೆ ಇದ್ದಂತೆ 2ಬಿ ಆಡಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ ಎಂದು ಅವರು ಹೇಳಿದರು.
ಇವತ್ತಿನ ಸಭೆಯಲ್ಲಿ ನಡೆದಿರುವ ಚರ್ಚೆ ಹಾಗೂ ನಿರ್ಧಾರವನ್ನು ಸರಕಾರದ ಗಮನಕ್ಕೆ ತರುತ್ತೇನೆ. ಅಲ್ಲದೆ, ಸಮುದಾಯವು ಮುಂದೆ ಯಾವ ರೀತಿ ಕಾನೂನು ಹೋರಾಟ ಮಾಡಲಿದೆಯೆ ಅದಕ್ಕೆ ವಕ್ಫ್ ಬೋರ್ಡ್ ಸಂಪೂರ್ಣವಾಗಿ ಜೊತೆ ಇರುತ್ತದೆ ಎಂದು ಶಾಫಿ ಸಅದಿ ಹೇಳಿದರು.