‘ಮೀಸಲಾತಿ’ ಹಣೆಗೆ ತುಪ್ಪ ಹಚ್ಚಿ, ಕಿವಿಗೆ ಹೂ ಇಡುವ ತಂತ್ರ: ಸಿದ್ದರಾಮಯ್ಯ
ಬೆಂಗಳೂರು, ಮಾ. 25: ‘ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರ ಕೇವಲ ಚುನಾವಣಾ ಗಿಮಿಕ್ಕು. ಹಣೆಗೆ ತುಪ್ಪ ಹಚ್ಚಿ, ಕಿವಿಗೆ ಹೂ ಇಡುವ ತಂತ್ರವಲ್ಲದೆ ಬೇರೇನೂ ಅಲ್ಲ ಎಂಬುದು ಸಾಮಾನ್ಯ ತಿಳುವಳಿಕೆ ಇರುವ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರಕಾರ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮೀಸಲಾತಿಯ ಕುರಿತು ತೆಗೆದುಕೊಂಡ ತೀರ್ಮಾನಗಳು ಸಮುದಾಯಗಳಲ್ಲಿ ಹಲವು ರೀತಿಯ ಗೊಂದಲ, ಅಶಾಂತಿಯನ್ನು ಹುಟ್ಟು ಹಾಕಿವೆ. ಸಿಎಂ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂಬುದು ಜನರ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಸ್ಪಷ್ಟವಾಗುತ್ತಿದೆ’ ಎಂದು ಹೇಳಿದ್ದಾರೆ.
‘ಪರಿಶಿಷ್ಟರ ಬಹುಪಾಲು ಮುಖಂಡರು ಸರಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಸರಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಡಿಲ್ಲ. ನ್ಯಾ.ನಾಗಮೋಹನ ದಾಸ್ ಸಮಿತಿ ಶಿಫಾರಸ್ಸಿನಂತೆ ಮೀಸಲಾತಿ ಹೆಚ್ಚಿಸುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 6 ತಿಂಗಳುಗಳಾಗುತ್ತಾ ಬಂದಿದೆ. ಅದನ್ನು ಲೋಕಸಭೆ ಅಧಿವೇಶನ ಮುಗಿಯುವಾಗ ಶೆಡ್ಯೂಲ್ 9ಕ್ಕೆ ಸೇರಿಸಿ ಎಂದು ಇದೆ 23ನೆ ತಾರೀಖು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಚುನಾವಣೆ ಘೋಷಣೆಯಾಗುವುದಕ್ಕೆ ಕೆಲವೇ ದಿನಗಳಿರುವ ವೇಳೆ ಒಳಮೀಸಲಾತಿಯ ನಾಟಕ ಆಡಲಾಗಿದೆ.
ಇಡಬ್ಲ್ಯುಎಸ್ ಮೀಸಲಾತಿಯನ್ನು ಕೇವಲ ನಾಲ್ಕೆ ದಿನಗಳಲ್ಲಿ ಮುಗಿದು ಸಂವಿಧಾನಕ್ಕೆ ತಿದ್ದುಪಡಿ ತಂದು ಅನುಷ್ಠಾನ ಮಾಡಲಾಯಿತು. ಈಗಲೂ ಮೀಸಲಾತಿಯ ಹೆಚ್ಚಳ ಮತ್ತು ಒಳಮೀಸಲಾತಿಯ ಕುರಿತು ಅಷ್ಟೇ ಕಾಳಜಿ ಮತ್ತು ಬದ್ಧತೆಯನ್ನು ತೋರಿಸಬೇಕೆಂದು ಹಲವು ಮುಖಂಡರುಗಳು ಒತ್ತಾಯಿಸುತ್ತಿದ್ದಾರೆ. ಇಷ್ಟನ್ನು ಮಾಡದೆ ಹೋದರೆ ಸರಕಾರ ಕೇವಲ ಚುನಾವಣಾ ಗಿಮಿಕ್ಕು ಮಾಡುತ್ತಿದೆ. ಸರಕಾರಕ್ಕೆ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸರಕಾರದ ಅಮಾನವೀಯ ನಿರ್ಧಾರದಿಂದ ಅತಿಹೆಚ್ಚು ಅನ್ಯಾಯಕ್ಕೆ ಒಳಗಾಗಿರುವವರು ಪ್ರವರ್ಗ-1, ಪ್ರವರ್ಗ-2 ಗಳಲ್ಲಿ ಹಿಂದುಳಿದವರು ಮತ್ತು ಪ್ರವರ್ಗ-2 ನಲ್ಲಿದ್ದ ಮುಸ್ಲಿಮರು. ಈ ಮೂರೂ ಪ್ರವರ್ಗಗಳಲ್ಲಿ ಶೇ.48-50ರಷ್ಟು ಜನಸಂಖ್ಯೆ ಇದೆಯೆಂದು ಹಲವು ವರದಿಗಳು ಹೇಳಿವೆ. ಇಷ್ಟು ಜನಸಂಖ್ಯೆಗೆ ಈಗ ಕೇವಲ ಶೇ.19ರಷ್ಟು ಮಾತ್ರ ಮೀಸಲಾತಿ ಇದೆ. ಪ್ರವರ್ಗ-1ರಲ್ಲಿ ಬೆಸ್ತರು, ಮೊಗವೀರರು, ಗೊಲ್ಲರು, ಉಪ್ಪಾರರು, ದಾಸರು ಸೇರಿ 95 ಜಾತಿಗಳಿವೆ. ಈ ಜಾತಿಗಳಲ್ಲಿ 80ಲಕ್ಷದಷ್ಟು ಜನಸಂಖ್ಯೆ ರಾಜ್ಯದಲ್ಲಿದೆ. ಒಟ್ಟಾರೆ ಜನಸಂಖ್ಯೆಯ ಶೇ.12ರಷ್ಟು ಜನರು ಈ ಪ್ರವರ್ಗದಲ್ಲಿದ್ದಾರೆ.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲ ರೀತಿಯಲ್ಲೂ ಹಿಂದುಳಿದಿವೆ. ಹಿಂದೆ ಈ ಜಾತಿಗಳ ಜನರಿಗೆ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸಿಗುವ ಎಲ್ಲ ಸವಲತ್ತುಗಳು ಸಿಗುತ್ತಿದ್ದವು. ಉಚಿತ ಶಿಕ್ಷಣ, ಉಚಿತ ಹಾಸ್ಟೆಲ್ ವ್ಯವಸ್ಥೆ ಇತ್ತು. ಇತ್ತೀಚೆಗೆ ಈ ಎಲ್ಲ ಸವಲತ್ತುಗಳು ನಿಂತು ಹೋಗಿವೆ. ಹಿಂದೆ ಹಾವನೂರರ ಶಿಫಾರಸ್ಸುಗಳನ್ನು ನ್ಯಾಯಾಲಯಗಳು ಅಂಗೀಕರಿಸಿದ್ದವು. ಇಂದು ಬಿಜೆಪಿ ಸರಕಾರದ ನೀತಿಯಿಂದ ಅತಿ ಹೆಚ್ಚು ಹಾನಿಗೆ ಒಳಗಾದ ಜಾತಿಗಳು ಪ್ರವರ್ಗ-1ರಲ್ಲಿವೆ. ಸರಕಾರ ಮೀಸಲಾತಿಯಲ್ಲಿ ಮೊದಲ ಆದ್ಯತೆ ಈ ವರ್ಗಕ್ಕೆ ಕೊಡಬೇಕಾಗಿತ್ತು. ಕೊಡದೆ ಅನ್ಯಾಯ ಮಾಡಿದೆ ಎಂದು ಅವರು ದೂರಿದ್ದಾರೆ.
ಪ್ರವರ್ಗ-1ರ ಹಾಗೆಯೆ ಪ್ರವರ್ಗ- 2 ‘ಎ’ಗೂ ಅನ್ಯಾಯವಾಗಿದೆ. ಅತಿ ಹೆಚ್ಚು ಶೋಷಣೆಗೆ ಒಳಗಾದ ಜಾತಿ ಜನರ ನೋವು ನಿವಾರಿಸುವುದು ಸರಕಾರದ ಆದ್ಯತೆಯಾಗಬೇಕು. ಅದನ್ನು ಬಿಟ್ಟು ಸಂವಿಧಾನದ ಆಶಯಗಳನ್ನು ಬದಿಗೆ ಒತ್ತಿ ಅರಣ್ಯನ್ಯಾಯಕ್ಕೆ ಮುನ್ನುಡಿ ಬರೆಯಲು ಹೊರಟಿರುವ ಬಸವರಾಜ ಬೊಮ್ಮಾಯಿ ಸರಕಾರ ಹಾಗೂ ಸರಕಾರದ ಈ ನಿರ್ಧಾರದ ಹಿಂದೆ ಕೆಲಸ ಮಾಡಿರುವ ಕೇಂದ್ರ ಸರಕಾರ ಹಾಗೂ ಆರೆಸೆಸ್ಸ್‍ನ ಜನರು ಕ್ಷಮೆಗೆ ಅರ್ಹರಲ್ಲ ಎಂದು ಅವರು ಟೀಕಿಸಿದ್ದಾರೆ.
‘ಹಿಂ.ಪ್ರವರ್ಗ 2-‘ಬಿ’ಯಲ್ಲಿರುವ ಮುಸ್ಲಿಮರಿಗೆ ಹಿಂದೆ ಇದ್ದ ಮೀಸಲಾತಿ ಮುಂದುವರೆಸಬೇಕು. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಧರ್ಮ ಬೇರೆ ಎಂಬ ಕಾರಣಕ್ಕೆ ತಾರತಮ್ಯ ಮಾಡುವುದು ಅಮಾನವೀಯ ಹಾಗೂ ಸಂವಿಧಾನ ಬಾಹಿರ. ಪ್ರವರ್ಗ 2 ‘ಸಿ’, 2 ‘ಡಿ’ ಎಂದು ಹೊಸ ಪ್ರವರ್ಗಗಳನ್ನು ಸೃಷ್ಟಿಸಿ ‘ಎ’ ಮತ್ತು 3 ‘ಬಿ’ ಪ್ರವರ್ಗಗಳನ್ನು ರದ್ದು ಮಾಡಿರುವ ಕುರಿತಂತೆ ನಮ್ಮ ವಿರೋಧವೇನೂ ಇಲ್ಲ. ಆದರೆ ಈ ಪ್ರವರ್ಗಗಳಿಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ವಿಚಾರದಲ್ಲೂ ನಮ್ಮ ಸಹಮತಿ ಇದೆ. ಆದರೆ ಪ್ರವರ್ಗ-2 ‘ಬಿ’ಯಲ್ಲಿನ ಮುಸಲ್ಮಾನರ ಮೀಸಲಾತಿಯನ್ನು ರದ್ದು ಪಡಿಸುವುದರ ಬದಲಿಗೆ ಇಡಬ್ಲ್ಯುಎಸ್‍ನ ಹೆಚ್ಚುವರಿ ಮೀಸಲಾತಿ ಈ ಪ್ರವರ್ಗಗಳಿಗೆ ಹಂಚಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದರೆ ಅದು ಮುತ್ಸದ್ಧಿತನವಾಗುತ್ತಿತ್ತು’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ