ಮಣಿಪಾಲ: ರೈಲ್ವೆ ಪೊಲೀಸರಿಗೆ ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ; ಪ್ರಕರಣ ದಾಖಲು

ಮಣಿಪಾಲ: ರೈಲಿನಲ್ಲಿ ಗಲಾಟೆ ಮಾಡುತ್ತಿದ್ದ ಪ್ರಯಾಣಿಕನೊಬ್ಬ ರೈಲ್ವೆ ಪೊಲೀಸ್ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಮಾ.24ರಂದು ಸಂಜೆ ವೇಳೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನಲ್ಲಿ ಕೆಲವೊಂದು ವ್ಯಕ್ತಿಗಳು ಗಲಾಟೆ ಮಾಡುತ್ತಿರುವ ಕುರಿತು ಬಂದ ಮಾಹಿತಿಯಂತೆ ಕೊಂಕಣ ರೈಲ್ವೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಝಿನಾ ಪಿಂಟೋ ಹಾಗೂ ಶ್ರೀಕಾಂತ್ ಎಂಬವರು ಬೋಗಿಯ ಬಳಿ ಹೋದರು. ಈ ವೇಳೆ ಕರ್ತವ್ಯ ನಿರತ ಟಿಟಿಇ ಹಾಗೂ ಸಾರ್ವಜನಿಕರೊಂದಿಗೆ ಗಲಾಟೆ ಮಾಡುತ್ತಿದ್ದ ಆರೋಪಿ ಸಮೀರ್ ಬಿವಾಜಿ ಸಿಂಧು ಎಂಬಾತನನ್ನು ಅವರು ವಶಕ್ಕೆ ಪಡೆದುಕೊಂಡರು.
ಈ ವೇಳೆ ಆರೋಪಿ ಟಿಟಿಇ ನೀಡಿದ ಜ್ಞಾಪನ ಪ್ರತಿಯನ್ನು ಹರಿದು ಬಿಸಾಡಿ ಇಬ್ಬರು ಕಾನ್ಸ್ಟೇಬಲ್ಗಳಿಗೆ ಅವಾಚ್ಯ ಶಬ್ದದಿಂದ ಬೈದು ನಿಂದಿಸಿದನು. ನಂತರ ಆತನನ್ನು ಕಚೇರಿಗೆ ಕರೆದುಕೊಂಡು ಹೋಗಿ ನಿರೀಕ್ಷಕರ ಮುಂದೆ ಹಾಜರು ಪಡಿಸಿದಾಗ ಅಲ್ಲೂ ಆತ ಝಿನಾ ಪಿಂಟೋ ಹಾಗೂ ಶ್ರೀಕಾಂತ್ರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







