ಮಂಗಳೂರು: ಹೊರಗುತ್ತಿಗೆ ಕಾರ್ಮಿಕರ ಮುಷ್ಕರ ವಾಪಸ್; ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರು
ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರ ನೇರಪಾವತಿಗೆ ಆಗ್ರಹಿಸಿ ಕಳೆದ ಎರಡು ವಾರದಿಂದ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಮುಷ್ಕರ ಶನಿವಾರ ವಾಪಸ್ ಪಡೆಯಲಾಗಿದೆ. ಅದರಂತೆ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಎಂದಿನಂತೆ ಆರಂಭಗೊಂಡಿದ್ದು, ರವಿವಾರದಿಂದ ಪೂರ್ಣಪ್ರಮಾಣದಲ್ಲಿ ಕೆಲಸ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಪೂರಕವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 13 ದಿನಗಳಿಂದ ತ್ಯಾಜ್ಯ ವಿಲೇವಾರಿಯು ಸಮರ್ಪಕವಾಗಿ ನಡೆದಿರಲಿಲ್ಲ. ಆದರೆ ಇದೀಗ ಮುಷ್ಕರ ವಾಪಸ್ ಪಡೆದ ಕಾರಣ ಪರಿಸ್ಥಿತಿ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಶನಿವಾರ ನಗರದ ವಿವಿಧೆಡೆ ತ್ಯಾಜ್ಯ ತುಂಬಿದ ಮೂಟೆಗಳ ರಾಶಿ ಕಂಡು ಬಂದಿದ್ದು, ಮುಷ್ಕರ ವಾಪಸ್ ಹಿನ್ನೆಲೆಯಲ್ಲಿ ರವಿವಾರದಿಂದ ಅವುಗಳ ವಿಲೇವಾರಿ ಪ್ರಕ್ರಿಯೆ ಬಿರುಸು ಪಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಮುಖ್ಯಮಂತ್ರಿ ಲಿಖಿತ ರವಸೆ ನೀಡಿದ್ದರು. ಹೋರಾಟದ ಪರಿಣಾಮ ಹಣಕಾಸು ಇಲಾಖೆಯಲ್ಲಿ ಸಂಬಂಧಿಸಿದ ಕಡತ ಪ್ರಕ್ರಿಯೆ ಮುಗಿದು ಮುಖ್ಯಮಂತ್ರಿಗಳ ಸಹಿಯಷ್ಟೇ ಬಾಕಿ ಇದೆ. ಹಾಗಾಗಿ ಮುಖ್ಯಮಂತ್ರಿ ಸಹಿ ಹಾಕುವವರೆಗೆ ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣ ಗೌಡ ಮಾಹಿತಿ ನೀಡಿದ್ದಾರೆ.
ಹೊರಗುತ್ತಿಗೆ ನೌಕರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ. ನಗರದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಎಂದಿನಂತೆ ನಡೆಯಲಿದ್ದು, ಯಥಾಸ್ಥಿತಿಗೆ ಬರಲು ಮೂರ್ನಾಲ್ಕು ದಿನ ಬೇಕಾಗಬಹುದು ಎಂದು ಮಂಗಳೂರು ಮನಪಾ ಆಯುಕ್ತ ಚನ್ನಬಸಪ್ಪಅಭಿಪ್ರಾಯಪಟ್ಟಿದ್ದಾರೆ.
ಸರಕಾರದಿಂದ ಸಂಕಷ್ಟ ಭತ್ತೆ, ಬೆಳಗಿನ ಉಪಹಾರದ ಭತ್ತೆ, ಒಟಿ (ಹೆಚ್ಚುವರಿ ದುಡಿಮೆಯ ವೇತನ) ಬಿಡುಗಡೆಯಾದರೂ ನೌಕರರಿಗೆ ದೊರೆಯುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಿದ್ದೇವೆ ಎಂದು ಸಫಾಯಿ ಕರ್ಮಚಾರಿ ಸಂಘದ ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ತಿಳಿಸಿದ್ದಾರೆ.
ಎರಡು ವಾರದಿಂದ ನಗರ ಪಾಲಿಕೆ ವ್ಯಾಪ್ತಿಯ ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಇನ್ನೂ ಒಂದು ವಾರ ಬೇಕಾಗಬಹುದು ಎಂದು ಮಂಗಳೂರು ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಹೇಳಿದ್ದಾರೆ.