'ಚಾಲಕ ಸ್ಥಾನ' ಪ್ರಾದೇಶಿಕ ಪಕ್ಷಗಳಿಗೆ ಬಿಡಿ: ಕಾಂಗ್ರೆಸ್‌ಗೆ ತೇಜಸ್ವಿ ಯಾದವ್ ಸಲಹೆ
ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವಲ್ಲಿ ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕ್ಷ ನಿಜ; ಆದರೆ ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿದೆಯೋ ಅಂಥ ಕಡೆಗಳಲ್ಲಿ "ಚಾಲಕ ಸ್ಥಾನ"ವನ್ನು ಆಯಾ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಬಿಡಬೇಕು ಎಂದು ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಕಾಂಗ್ರೆಸ್ ಪಕ್ಷಕ್ಕೆ ಸಲಹೆ ಮಾಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಹಾಲಿ ಸಿಎಂ ನಿತೀಶ್ ಕುಮಾರ್ ಹಾಗೂ ತಾವು ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷವನ್ನು ಜತೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಯಾದವ್ ಬಹಿರಂಗಪಡಿಸಿದರು.
"ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ಮಹಾ ಮೈತ್ರಿಕೂಟದ ಭಾಗ. ನಾವು ಇಲ್ಲಿ ಅತಿದೊಡ್ಡ ಪಕ್ಷ. ಆದರೆ ಕಾಂಗ್ರೆಸ್ ಇಡೀ ದೇಶದಲ್ಲಿ ಅತಿ ದೊಡ್ಡ ವಿರೋಧ ಪಕ್ಷ. ಲಾಲೂಜಿ, ನಿತೀಶ್‌ಜಿ ಹಾಗೂ ನಾನು ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳನ್ನು ಜತೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಸಿಬಿಐ ಕೇಂದ್ರ ಕಚೇರಿಯಿಂದ ಹೊರ ಬರುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಎಂಟು ಗಂಟೆಗೂ ಹೆಚ್ಚು ಕಾಲ ಸಿಬಿಐ ಅಧಿಕಾರಿಗಳು ತೇಜಸ್ವಿಯವರನ್ನು ವಿಚಾರಣೆಗೆ ಗುರಿಪಡಿಸಿದರು.
"ಒಂದು ಅಂಶವಂತೂ ಸ್ಪಷ್ಟ; ನಾವು ಇದನ್ನು ಹಿಂದೆಯೂ ಹೇಳಿದ್ದೆವು. ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆಯೋ ಅಲ್ಲಿ ಚಾಲಕ ಸ್ಥಾನ ಅವುಗಳಿಗೆ ಇರಬೇಕು. ಕಾಂಗ್ರೆಸ್‌ನ ಮಂದಿ ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಸ್ಪಷ್ಟಪಡಿದರು.