ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ ಸ್ವಾವಲಂಬಿ: ರಘುಪತಿ ಭಟ್
ಹೆಗ್ಗುಂಜೆ, ಬೆಳ್ಮಣ್, ಬೆಳಪು ಉಪವಿದ್ಯುತ್ ಕೇಂದ್ರಗಳ ಉದ್ಘಾಟನೆ
ಉಡುಪಿ, ಮಾ.26: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಒಟ್ಟು 124.72ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 220/110/11ಕೆ.ವಿ. ಹೆಗ್ಗುಂಜೆ, 110/11ಕೆ.ವಿ. ಬೆಳ್ಮಣ್, 110/11ಕೆ.ವಿ. ಬೆಳಪು ಉಪ ವಿದ್ಯುತ್ ಕೇಂದ್ರ ಹಾಗೂ ಇತರ ಕಾಮಗಾರಿಗಳ ಅನಾವರಣ ಕಾರ್ಯಕ್ರಮ ರವಿವಾರ ಕರ್ನಾಟಕ ವಿದ್ಯುಚ್ಛಕ್ತಿ ನೌಕರರ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂಧನ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಇಂದು ವಿದ್ಯುತ್ ಸಮಸ್ಯೆಗಳು ನಿವಾರಣೆಯಾಗಿವೆ. ಅಲ್ಲದೆ ಸರಕಾರ ಸೋಲಾರ್, ಪವನ ವಿದ್ಯುತಿಗೂ ಪ್ರೋತ್ಸಾಹ ನೀಡುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಬದಲು ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸೋಲಾರ್ ವಿದ್ಯುತ್ ಹೆಚ್ಚು ಬಳಕೆಯಿಂದ ದೇಶದ ಆರ್ಥಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ. ದೇಶದ ಅಭಿವೃದ್ಧಿ ಇಂಧನದ ಮೇಲೆ ಅವಲಂಬಿಸಿಕೊಂಡಿದೆ ಎಂದ ಅವರು, ವಿದ್ಯುತ್ ಪಾವತಿಯಲ್ಲಿ ಮೆಸ್ಕಾಂ ಗ್ರಾಹಕರು ಮೊದಲನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ನಮ್ಮಲ್ಲಿ ವಿದ್ಯುತ್ ಸೋರಿಕೆ, ಕಳ್ಳತನ, ಬಿಲ್ ಪಾವತಿ ಬಾಕಿ ಕೂಡ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವಿದ್ಯುತ್ ಕಂಪನಿಗಳು ದೊಡ್ದ ದೊಡ್ದ ಕಾಮಗಾರಿ ನಡೆಸುವ ವೇಳೆ ರೈತರಿಗೆ ಕೃಷಿ ಭೂಮಿಗೆ ಗರಿಷ್ಟ ಮಟ್ಟದ ಮಾರುಕಟ್ಟೆಯ ಬೆಲೆ ಆಧಾರದಲ್ಲಿ ಪರಿಹಾರ ನೀಡಬೇಕು. ಆದರೆ ಕೇವಲ ಒಂದು ಬಾರಿ ಮಾತ್ರವಲ್ಲ ಕೆಲವು ವರ್ಷಗಳ ಬಳಿಕ ಮತ್ತೆ ಪರಿಹಾರ ಹಣವನ್ನು ಕೂಡ ನೀಡುವ ಬಗ್ಗೆ ಯೋಚನೆ ಮಾಡಬೇಕು. ಈ ವಿಚಾರದಲ್ಲಿ ನಾನು ರೈತರ ಪರವಾಗಿ ಮಾತನಾಡಲು ಸದಾ ಸಿದ್ದ ಎಂದು ತಿಳಿಸಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿದರು. ಮಂಗಳೂರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ನಿಗಮದ ಹಾಸನ ಪ್ರಸರಣ ವಲಯದ ಮುಖ್ಯ ಇಂಜಿನಿಯರ್ ಎಂ.ಆರ್.ಶಾನುಭಾಗ್, ಮೆಸ್ಕಾಂ ಉಡುಪಿ ವೃತ್ತ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ, ನಿಗಮದ ಕಾರ್ಯಪಾಲಕ ಇಂಜಿನಿಯರ್ ಗಳಾದ ಗಂಗಾಧರ ಕೆ., ಶ್ರೀನಿವಾಸ ಮೊದಲಾದ ವರು ಉಪಸ್ಥಿತರಿದ್ದರು.
ನಿಗಮದ ಉಡುಪಿ ಬಹೃತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಭಾರತಿ ಸ್ವಾಗತಿಸಿದರು. ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ರವಿಕಾಂತ ಕಾಮತ್ ವಂದಿಸಿದರು.