ಕಣಚೂರು ಮೋನು ಅಸಾಧ್ಯವನ್ನು ಸಾಧ್ಯವಾಗಿಸಿದ ವ್ಯಕ್ತಿ: ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ
ದೇರಳಕಟ್ಟೆಯಲ್ಲಿ ಡಾ. ಯು.ಕೆ.ಮೋನುರಿಗೆ ʼಹುಟ್ಟೂರ ನಾಗರಿಕ ಸನ್ಮಾನʼ
ಕೊಣಾಜೆ: ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಇಂದು ಈ ಶ್ರೇಷ್ಠತೆಯ ಮಟ್ಟಕ್ಕೆ ಏರಿರುವ ಡಾ. ಕಣಚೂರು ಮೋನು ಅವರು ತಮ್ಮ ಜೀವನದಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಿದ ವ್ಯಕ್ತಿಯಾಗಿದ್ದಾರೆ. ಅವರ ಈ ಸಾಧನೆಗೆ ಅವರ ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಕಠಿಣ ಪರಿಶ್ರಮವೇ ಪ್ರಮುಖ ಕಾರಣವಾಗಿದೆ ಎಂದು ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಹಾಜಿ.ಯು.ಕೆ.ಮೋನು ಅವರಿಗೆ ʼಹುಟ್ಟೂರ ನಾಗರಿಕ ಸನ್ಮಾನʼ ಮತ್ತು ಸೌಹಾರ್ದ ಇಪ್ತಾರ್ ಕೂಟ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಣಚೂರು ಮೋನು ಎಂಬ ವ್ಯಕ್ತಿಯಲ್ಲಿ ಒಂದು ಸಾಹಸ ಇದೆ. ಸಾಧನೆಯ ಹಿಂದೆ ಪರಿಶ್ರಮವಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಇನ್ನಷ್ಟು ಕೊಡುಗೆ ಸಿಗುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀದಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ವಿದ್ಯೆಯಿಂದ ತಾನು ವಂಚಿತರಾದರೂ ಸಮಾಜಕ್ಕೆ ಶಿಕ್ಷಣ ನೀಡಬೇಕು ಎಂಬ ಕನಸಿನೊಂದಿಗೆ ವಿದ್ಯಾ ಸಂಸ್ಥೆ ಯನ್ನು ನಡೆಸುವುದರ ಮೂಲಕ ಸಾವಿರಾರು ಮಕ್ಕಳಿಗೆ ಶಿಕ್ಷಣ, ನೂರಾರು ಜನರಿಗೆ ಉದ್ಯೋಗ ನೀಡುವುದರೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವರ ಸರಳತ್ವ, ಸಜ್ಜನಿಕೆಯಿಂದ ಕೂಡಿದ ಹೃದಯ ಶ್ರೀಮಂತಿಕೆ ಇರುವ ಕಣಚೂರು ಮೋನು ಅವರಿಗೆ ಗೌರವ ಡಾಕ್ಟರೇಟ್ ಅರ್ಹವಾಗಿಯೇ ಸಂದಿದೆ ಎಂದರು.
ಪನೀರ್ ಚರ್ಚ್ ಧರ್ಮ ಗುರು ಫಾ. ವಿಕ್ಟರ್ ಡಿಮೆಲ್ಲೋ ಮಾತನಾಡಿ, ಕಣಚೂರು ಮೋನು ಶೂನ್ಯದಿಂದ ಆರಂಭಗೊಂಡ ಅವರ ಜೀವನ ಇಂದು ಸಮಾಜಕ್ಕೆ ಬೆಳಕಾಗಿ ಮೂಡಿಬಂದಿದ್ದಾರೆ ಎಂದರು.
ಧಾರ್ಮಿಕ ಗುರು ಎಂಎಸ್ ಎಂ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಝೈನಿ ಅವರು ಮಾತನಾಡಿ, ಕಣಚೂರು ಮೋನು ಅವರು ಸಾಧನೆಯಿಂದ ಶ್ರೇಷ್ಠತೆಯತ್ತ ಸಾಗಿದರೂ ನಡೆದು ಬಂದ ಹಾದಿಯನ್ನು ಅವರು ಮರೆಯಲಿಲ್ಲ, ಅವರ ಸಮಾಜಸೇವೆ ಮಾದರಿಯಾಗಿದೆ ಎಂದರು.
ಡಾ.ಹಾಜಿ.ಕಣಚೂರು ಮೋನು ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಜೀವನದಲ್ಲಿ ನಾನು ಏನನ್ನೂ ಬಯಸಿದವನಲ್ಲ. ಯಾವುದೇ ಸಾಧನೆ ಮಾಡಿದ್ದರೂ, ಯಾವುದೇ ಪದವಿಯನ್ನು ಪಡೆದಿದ್ದರೂ ಅದೆಲ್ಲವೂ ಭಗವಂತನ ಕೃಪೆಯಿಂದ ಸಾಧ್ಯವಾಗಿದೆ. ನನಗೆ ಮಂಗಳೂರು ವಿವಿಯಿಂದ ದೊರೆತ ಡಾಕ್ಟರೇಟ್ ಪದವಿಯನ್ನು ತಂದೆ ತಾಯಿಯ ಮಡಿಲಿಗೆ ಅರ್ಪಿಸುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಕಣಚೂರು ಮೋನು ಮಂಗಳೂರು ವಿವಿಯಿಂದ ದೊರಕಿದ ಪುರಸ್ಕಾರ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಹಂತ ಹಂತವಾಗಿ ಹೇಗೆ ಶ್ರೇಷ್ಠತೆಯತ್ತ ಸಾಗಬಹುದು ಎನ್ನುವುದಕ್ಕೆ ಅವರು ಮಾದರಿಯಾಗಿದ್ದಾರೆ. ಇನ್ನಷ್ಟು ಸಮಾಜ ಸೇವೆ ಅವರಿಂದ ನಡೆಯುವಂತಾಗಲಿ ಎಂದರು.
ಸಾಮಾಜಿಕ ಮುಂದಾಳು ಹೈದರ್ ಪರ್ತಿಪ್ಪಾಡಿ ಅಭಿನಂದನಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು, ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕರಾದ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ಅಭಿನಂದನಾ ಸಮಿತಿಯ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಅಬೂಬಕ್ಕರ್ ಕೈರಂಗಳ ಸನ್ಮಾನ ಪತ್ರ ವಾಚಿಸಿದರು. ಚಂದ್ರಹಾಸ್ ಶೆಟ್ಟಿ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.