ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ವಿರುದ್ಧ ಕಾನೂನು ಹೋರಾಟ: ಎಂ.ಎಚ್. ಹನೀಫ್
ಬೆಂಗಳೂರು: ಬೆಂಗಳೂರು ನಗರದ ವರ್ತೂರು ಜಾಮಿಯಾ ಮಸೀದಿ(ವಕ್ಫ್ ಸಂಸ್ಥೆ)ಯ ಸರ್ವೆ ನಂ.209ರಲ್ಲಿರುವ 10 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವ್ಯಾಜ್ಯದಲ್ಲಿ ತನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿರುವ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅಡ್ವೊಕೇಟ್ ಎಂ.ಎಚ್.ಹನೀಫ್ ಎಚ್ಚರಿಸಿದ್ದಾರೆ.
ರವಿವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1975ರಿಂದಲೂ ಈ ಜಮೀನಿಗೆ ಸಂಬಂಧಿಸಿದಂತೆ ಭೂ ನ್ಯಾಯಮಂಡಳಿಯಲ್ಲಿ ವ್ಯಾಜ್ಯ ನಡೆಯುತ್ತಿತ್ತು. 2021ರಲ್ಲಿ ಅಮೀರ್ ಪಾಷ ಪರವಾಗಿ ಭೂ ನ್ಯಾಯಮಂಡಳಿಯು ಸ್ವಾಧೀನ ಹಕ್ಕನ್ನು ದೃಢಪಡಿಸಿತು ಎಂದರು.
ವರ್ತೂರು ಜಾಮಿಯಾ ಮಸೀದಿಯು ಹಿರಿಯ ವಕೀಲರಾದ ಎಸ್.ಆರ್.ಅನುರಾಧಾ ಎಂಬವರ ಮೂಲಕ ಭೂ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ. ಅಮೀರ್ ಪಾಷ ಅವರು ಈ ಸಂಬಂಧ ಹೈಕೋರ್ಟ್‍ನಲ್ಲಿ ತಮ್ಮ ಪರವಾಗಿ ವಕಾಲತ್ ನಾಮ ದಾಖಲು ಮಾಡಿದ್ದಾರೆ. 2021ರಲ್ಲಿ ಹೈಕೋರ್ಟ್ ಭೂ ನ್ಯಾಯಮಂಡಳಿಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಹನೀಫ್ ತಿಳಿಸಿದರು.
ಇದರ ನಡುವೆಯೆ ದಿವಂಗತ ಅಮೀರ್ ಪಾಷ ಅವರ ಕುಟುಂಬ ಸದಸ್ಯರು ಗ್ರ್ಯಾಂಡ್ ಸ್ಕೈ ಇನ್ಫ್ರಾ ಪ್ರಾಜೆಕ್ಟ್ ಎಂಬ ಸಂಸ್ಥೆಗೆ ಆ 10 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಇದರ ವಿರುದ್ಧವಾಗಿ ವಕ್ಫ್ ಬೋರ್ಡ್ ಎಸ್.ಆರ್.ಅನುರಾಧಾ ಅವರಿಗೆ ವಹಿಸಿಕೊಟ್ಟಿದ್ದ ಪ್ರಕರಣಗಳನ್ನು ಮತ್ತೊಬ್ಬ ವಕೀಲರಾದ ಸ್ವಾತಿ ಅಶೋಕ್ ಅವರಿಗೆ ಮರು ಹಂಚಿಕೆ ಮಾಡಿತು. ಆನಂತರ, ನನಗೆ ಈ ಪ್ರಕರಣದ ಜವಾಬ್ದಾರಿ ವಹಿಸಲಾಯಿತು ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ನಾನು ಭೂಮಿಯನ್ನು ಖರೀದಿಸಿದ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದೇನೆ. ಆನಂತರ, ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಕಾನೂನು ವಿಭಾಗದ ಅಧ್ಯಕ್ಷ ರಿಯಾಝ್ ಖಾನ್, ಕೇರಳ ಮೂಲದ ಹಾಗೂ ಪ್ರಸಕ್ತ ಖತರ್‍ನಲ್ಲಿ ನೆಲೆಸಿರುವ ನೌಫಲ್‍ಗೆ ಈ ಪ್ರಕರಣದಲ್ಲಿ ನೆರವು ನೀಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ದೇಶದ ಗ್ರ್ಯಾಂಡ್ ಮುಫ್ತಿ ಅವರಿಗೆ ಸಮರ್ಪಕ ಮಾಹಿತಿ ನೀಡದೆ ಅವರ ಮೂಲಕವು ಎರಡು ಬಾರಿ ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ಹನೀಫ್ ದೂರಿದರು.
ವಕ್ಫ್ ಭೂಮಿಯನ್ನು ಖರೀದಿ ಮಾಡಿರುವ ಸಂಸ್ಥೆಯ ಜೊತೆಗೆ ನೌಫಲ್ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದುದರಿಂದಲೆ, ಶಾಫಿ ಸಅದಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ವಿಷಯವನ್ನು ಪ್ರತಿಭಟಿಸಿ ನಾನು ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರವನ್ನು ಬರೆದಿದ್ದೇನೆ. ಇವರ ಅಕ್ರಮ ಬಯಲಿಗೆ ಬರುವ ಆತಂಕದಿಂದ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ನನ್ನ ಕುಟುಂಬದ ಗೌರವಕ್ಕೂ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿಯ ಒಂದೇ ಒಂದು ಇಂಚು ಭೂಮಿಯನ್ನು ಲಪಟಾಯಿಸಲು ನಾನು ಅವಕಾಶ ನೀಡುವುದಿಲ್ಲ. ನನ್ನ ವಿರುದ್ಧ ಮಾಡಿರುವ ಎಲ್ಲ ಆಪಾದನೆಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹನೀಫ್ ಹೇಳಿದರು.