ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತು ಇದ್ದರೆ ಮೀಸಲಾತಿ ರದ್ದುಪಡಿಸಲಿ: ಸಚಿವ ಆರ್. ಅಶೋಕ್ ಸವಾಲು
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ದಮ್, ತಾಕತ್ತು ಇದ್ದರೆ ಮೀಸಲಾತಿ ರದ್ದು ಮಾಡಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮೀಸಲಾತಿ ರದ್ದು ಮಾಡುತ್ತೇವೆಂದು ಹಾಕಲಿ. ಮೀಸಲಾತಿ ಕೊಟ್ಟಿರುವುದು ಸರಿ ಇಲ್ಲ ಎಂದರೆ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಒಕ್ಕಲಿಗರು ಮತ್ತು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ಗೆ ಹೊಟ್ಟೆ ಉರಿ’ ಎಂದು ಟೀಕಿಸಿದ ಅವರು, ‘ಲಿಂಗಾಯತ, ಒಕ್ಕಲಿಗ ಸ್ವಾಮೀಜಿಗಳಿಗೆ ಬೆದರಿಸಿ ಮೀಸಲಾತಿಗೆ ಒಪ್ಪಿಸಲಾಗಿದೆ ಎಂದು ಡಿಕೆಶಿ ಹೇಳುವ ಮೂಲಕ ಸ್ವಾಮೀಜಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕೂಡಲೇ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
‘ಹೆದರಿಸುವುದು, ಗದರಿಸುವುದು ಕಾಂಗ್ರೆಸ್ ಸಂಸ್ಕೃತಿ. ಅವರದ್ದು ಗೂಂಡಾ ರಾಜಕಾರಣ. ಡಿಕೆಶಿ, ಸಿದ್ದರಾಮಯ್ಯರಿಗೆ ಜ್ಞಾನ ಕಡಿಮೆ ಅನ್ನಿಸುತ್ತೆ. ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯನಾ?. ನಿಜಕ್ಕೂ ಇದು ಅವಮಾನ ಮಾಡಿದಂಗೆ. ಕಾಂಗ್ರೆಸ್ ಸ್ವಾಮೀಜಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳು ಮೀಸಲಾತಿ ಒಪ್ಪಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಮುಸ್ಲಿಮ್ ಬಗ್ಗೆ ಅತೀ ಪ್ರೀತಿ ಇದೆ. ಸಂವಿಧಾನ ತಿದ್ದುಪಡಿ ಮಾಡುವವರು ಇವರು ಯಾರದ್ದೋ ಮೀಸಲಾತಿ ಕಿತ್ತು ಯಾರಿಗೋ ಕೊಟ್ಟರು ಎಂದು ಕೇಳೋದಿಕ್ಕೆ ನೀವ್ಯಾರು?. ನಿಮ್ಮ ಸರಕಾರ ಇದ್ದಾಗ ನೀವೇಕೆ ಮಾಡಲಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಭಿಕ್ಷುಕರು ಇದ್ದಂತೆ’ ಎಂದು ಅವರು ಟೀಕಿಸಿದರು.
ಇದನ್ನೂ ಓದಿ: ಬಿಜೆಪಿ ಮುಸ್ಲಿಮರ ಮೀಸಲಾತಿ ಕಡಿತಗೊಳಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಎಚ್.ಡಿ. ಕುಮಾರಸ್ವಾಮಿ