ಮಂಗಳೂರು: ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಸ್ಸಿ-ಎಸ್ಟಿ ಅಹವಾಲು ಸಭೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಹವಾಲು ಸಭೆಯು ಪೊಲೀಸ್ ಕಮಿಷನರ್ ಕುಲದಿಪ್ ಕುಮಾರ್ ಜೈನ್‌ರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವ್ಯಕ್ತಿಯೊಬ್ಬರು, ಕೆಲವು ವಾಹನಿಗರು ಸಂಚಾರ ನಿಯಮವನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಪದೇ ಪದೇ ಉಲ್ಲಂಘನೆ ಮಾಡುವವರ ಡ್ರೈವಿಂಗ್ ಲೈಸನ್ಸ್ ರದ್ದುಪಡಿಸಲು ಆರ್‌ಟಿಒಗೆ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.
ಕಾನೂನು ಪಾಲನೆ ಮಾಡಿದರೆ ದಂಡ ಕಟ್ಟುವ ಪ್ರಮೇಯ ಬರುವುದಿಲ್ಲ. ಆದರೆ ಕೆಲವರು ಸಂಚಾರ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ದಂಡ ಕಟ್ಟುತ್ತಿದ್ದಾರೆ. ದಿನದಲ್ಲಿ ಒಮ್ಮೆ ದಂಡ ಪಾವತಿಸಿದರೆ ಬಳಿಕ ಬೇಕಾಬಿಟ್ಟಿ ಸಂಚಾರ ನಿಯಮ ಉಲ್ಲಂಘಿಸಬಹುದು ಎಂಬ ಮನೋಭಾವ ಕೆಲವರಲ್ಲಿದೆ. ಅಲ್ಲದೆ ಸಂಚಾರ ಪೊಲೀಸರನ್ನು ಅಪಹಾಸ್ಯ ಮಾಡುವವರಿದ್ದಾರೆ. ಹಾಗಾಗಿ ಹೆಲ್ಮೆಟ್ ರಹಿತ ಬೈಕ್ ಸವಾರಿ, ಟ್ರಿಪಲ್ ರೈಡ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಅಂತಹವರ ಲೈಸನ್ಸ್ ರದ್ದುಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಕೆಲವು ಖಾಸಗಿ ಬಸ್‌ಗಳ ಚಾಲಕರು ಇಯರ್ ಪೋನ್ ಹಾಕಿಕೊಂಡು ಬಸ್ ಚಲಾಯಿಸುತ್ತಿದ್ದಾರೆ. ಆ ಬಗ್ಗೆ ತಕ್ಷಣ ಪೊಲೀಸರಿಗೆ ತಿಳಿಸಲು ಬಸ್‌ಗಳಲ್ಲಿ ವಾಟ್ಸ್‌ಆ್ಯಪ್ ನಂಬರ್ ಪ್ರದರ್ಶಿಸಬೇಕು ಎಂದು ಸದಾಶಿವ ಉರ್ವಸ್ಟೋರ್ ಮನವಿ ಮಾಡಿದರು.
ಮಟ್ಕಾ ದಂಧೆಯ ಬಗ್ಗೆ ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಲಾಗಿತ್ತು. ಆದರೆ ದೂರು ನೀಡಿ ಮನೆ ತಲುಪುವಾಗ ಮಟ್ಕಾ ದಂಧೆಯವರು ಬೆದರಿಕೆ ಹಾಕಿದ್ದಾರೆ. ಹಾಗಾದರೆ ದೂರಿನ ವಿಷಯ ಸೋರಿಕೆ ಮಾಡಿದ್ದು ಯಾರು ಎಂದು ಒಬ್ಬರು ಪ್ರಶ್ನಿಸಿದರು.
ಬೆಂದೂರ್‌ವೆಲ್‌ನಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಇಲ್ಲಿರುವ ಎರಡು ಶಾಲೆಗಳ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬರುವ ಅವರ ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹಾಗಾಗಿ ಅಂತಹ ವಾಹನಗಳನ್ನು ಶಾಲೆಗಳ ಮೈದಾನದಲ್ಲಿಯೇ ನಿಲ್ಲಿಸಲು ಸೂಚನೆ ನೀಡಬೇಕು ಎಂದು ಅನಿಲ್ ಕಂಕನಾಡಿ ಒತ್ತಾಯಿಸಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು. ದಲಿತ ಸಂಘಟನೆಗಳ ಮುಖಂಡರಾದ ಎಸ್‌ಪಿ ಆನಂದ, ವಿಶ್ವನಾಥ ಚೆಂಡ್ತಿ ಮಾರು, ಅಮಲ ಜ್ಯೋತಿ, ಸುನಿಲ್, ಜಗದೀಶ್ ಪಾಂಡೇಶ್ವರ ಮತ್ತಿತರರು ವಿಷಯಗಳನ್ನು ಪ್ರಸ್ತಾಪಿಸಿದರು.