ಅಮೃತಪಾಲ್ ಸಿಂಗ್ ಗೆ ಆಶ್ರಯ ನೀಡಿದ್ದ ಪಟಿಯಾಲದ ಮಹಿಳೆಯ ಬಂಧನ
ಚಂಡಿಗಡ,ಮಾ.26: ತಲೆಮರೆಸಿಕೊಂಡಿರುವ ಮೂಲಭೂತವಾದಿ ಸಿಖ್ ಬೋಧಕ,ವಾರಿಸ್ ಪಂಜಾಬ ದೆ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಪಟಿಯಾಲದ ಮಹಿಳೆಯೋರ್ವಳನ್ನು ಪಂಜಾಬ ಪೊಲೀಸರು ಬಂಧಿಸಿದ್ದಾರೆ.
ಅಮೃತಪಾಲ್ ಮತ್ತು ಆತನ ಸಹಚರ ಪಪಲ್ಪ್ರೀತ್ ಸಿಂಗ್ ಮಾ.19ರಂದು ಪಟಿಯಾಳಾದ ಹರಗೋಬಿಂದ್ ನಗರದ ನಿವಾಸಿ ಬಲ್ಬೀರ್ ಕೌರ್ ಮನೆಯಲ್ಲಿ ಐದಾರು ಗಂಟೆಗಳ ಕಾಲ ಉಳಿದುಕೊಂಡಿದ್ದರು ಮತ್ತು ಬಳಿಕ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ನತ್ತ ತೆರಳಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ರವಿವಾರ ತಿಳಿಸಿದರು.
ಜಾಕೆಟ್ ಮತ್ತು ಟ್ರೌಸರ್ ಧರಿಸಿದ್ದ ಅಮೃತಪಾಲ್ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮತ್ತು ಪಪಲ್ಪ್ರೀತ್ ಸಿಂಗ್ ಆತನ ಜೊತೆಯಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಶನಿವಾರ ಪಟಿಯಾಳಾದಲ್ಲಿ ಬಹಿರಂಗಗೊಂಡಿದ್ದವು.
ಇದಕ್ಕೂ ಮುನ್ನ ಶಹಾಬಾದ್ನ ತನ್ನ ಮನೆಯಲ್ಲಿ ಅಮೃತಪಾಲ್ ಮತ್ತು ಪಪಲ್ಪ್ರೀತ್ಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಲ್ಜಿತ್ ಕೌರ್ ಎಂಬಾಕೆಯನ್ನು ಪೊಲಿಸರು ಬಂಧಿಸಿದ್ದರು.
ಶನಿವಾರ ಖನ್ನಾ ಪೊಲೀಸರು ಸಹ ಅಮೃತಪಾಲ್ನ ಸಹಚರ ತೇಜಿಂದರ್ ಸಿಂಗ್ ಗಿಲ್ ಅಲಿಯಾಸ್ ಗೂರ್ಖಾ ಬಾಬಾ ಎಂಬಾತನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಲ್ವಂತ್ ಸಿಂಗ್ ಎಂಬಾತನನ್ನು ಬಂಧಿಸಿದ್ದರು. ಗಿಲ್ನನ್ನು ಬುಧವಾರವೇ ಪೊಲೀಸರು ಬಂಧಿಸಿದ್ದರು.
ಮಾ.18ರಿಂದ ತಲೆಮರೆಸಿಕೊಂಡಿರುವ ಅಮೃತಪಾಲ್ನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.