99ನೇ ‘ಮನ್ ಕಿ ಬಾತ್’: ಅಂಗಾಂಗ ದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ
ಹೊಸದಿಲ್ಲಿ, ಮಾ. 26: ಅಂಗಾಂಗ ದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಜನರಲ್ಲಿ ಮನವಿ ಮಾಡಿದ್ದಾರೆ.
ಅವರು 99ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದರು.
ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಬಗ್ಗೆ ಪ್ರಧಾನಿ ಅವರು ಸಂತಸ ವ್ಯಕ್ತಪಡಿಸಿದರು. ಇತರರಿಗೆ ಹೊಸ ಬದುಕು ನೀಡಲು ಜನರನ್ನು ಉತ್ತೇಜಿಸಲು ಹಲವು ನಿಯಮಗಳನ್ನು ಸರಕಾರ ಸಡಿಲಗೊಳಿಸಿದೆ ಎಂದು ಅವರು ಹೇಳಿದರು.
ಅಂಗಾಂಗ ದಾನ ಪ್ರಚಾರ ಮಾಡುವ ಉದ್ದೇಶದಿಂದ ಸರಕಾರ ಇದಕ್ಕೆ ಸಂಬಂಧಿಸಿದ ಕನಿಷ್ಠ ವಯೋಮಿತಿ ಹಾಗೂ ವಾಸ್ತವ್ಯ ನಿಯಮಗಳನ್ನು ತೆಗೆದು ಹಾಕಿದೆ ಎಂದರು.
‘‘ಈ ದಿಶೆಯಲ್ಲಿ ವಾಸ್ತವ್ಯದ ಷರತ್ತುಗಳನ್ನು ತೆಗೆದು ಹಾಕಲು ಸರಕಾರ ನಿರ್ಧರಿಸಿದೆ. ಅಂಗಾಂಗ ದಾನ ಮಾಡಲು ಬಯಸುವವರು ಯಾವುದೇ ರಾಜ್ಯದಲ್ಲಿ ಕೂಡ ನೋಂದಣಿ ಮಾಡಬಹುದು. ಅಂಗಾಂಗ ದಾನಕ್ಕೆ ಕನಿಷ್ಠ 65 ವರ್ಷವಾಗಬೇಕೆಂಬ ನಿರ್ಬಂಧವನ್ನು ಸರಕಾರ ತೆಗೆದು ಹಾಕಿದೆ. ಆದುದರಿಂದ ದೊಡ್ಡ ಸಂಖ್ಯೆಯಲ್ಲಿ ಅಂಗಾಂಗ ದಾನ ಮಾಡಲು ಮುಂದೆ ಬನ್ನಿ ಎಂದು ನಾನು ಜನರಲ್ಲಿ ವಿನಂತಿಸುತ್ತೇನೆ. ನಿಮ್ಮ ಒಂದು ನಿರ್ಧಾರ ಹಲವರ ಜೀವಗಳನ್ನು ರಕ್ಷಿಸಬಲ್ಲುದು ಹಾಗೂ ಹಲವರು ಬದುಕುವಂತೆ ಮಾಡಬಲ್ಲದು’’ ಎಂದು ಪ್ರಧಾನಿ ಹೇಳಿದ್ದಾರೆ.
ತನ್ನ ಭಾಷಣದಲ್ಲಿ ಪ್ರಧಾನಿ ಅವರು, ಭಾರತದ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಶಕ್ತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನವರಾತ್ರಿ ಶಕ್ತಿಯನ್ನು ಪೂಜಿಸುವ ಕಾಲ. ಭಾರತದ ನಾರಿ ಶಕ್ತಿ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ ಪ್ರಧಾನಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯ ಸಾಧನೆಯನ್ನು ಶ್ಲಾಘಿಸಿದರು.
75 ವರ್ಷಗಳ ಬಳಿಕ ವಿಧಾನ ಸಭೆಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿರುವ ನಾಗಾಲ್ಯಾಂಡ್‌ನ ರಾಜಕೀಯವನ್ನು ಪ್ರಧಾನಿ ಅವರು ಉಲ್ಲೇಖಿಸಿದರು.
ಮರಣಾನಂತರ ತಮ್ಮ ಅಂಗಾಂಗ ದಾನ ಮಾಡುವರನ್ನು ಸ್ವೀಕರಿಸುವ ವ್ಯಕ್ತಿಗಳಿಗೆ ದೇವರ ಸಮಾನರು. ಜನರು ಇದಕ್ಕೆ ಆದ್ಯತೆ ನೀಡಬೇಕು. ಇದರಿಂದ ಹಲವು ಜೀವಗಳನ್ನು ಉಳಿಸಬಹುದು ಎಂದು ಅವರು ತಿಂಗಳ ರೇಡಿಯೋ ಕಾರ್ಯಕ್ರಮ ಮಂಕಿಬಾತ್‌ನಲ್ಲಿ ಹೇಳಿದರು.
‘‘ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ತೃಪ್ತಿಯ ವಿಷಯವಾಗಿದೆ. ’’