ದೇಶಪ್ರೇಮ-ಪ್ರಗತಿಯ ಬದ್ಧತೆಯೇ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ: ಅಮಿತ್ ಶಾ
ವಿಧಾನಸೌಧ ಎದುರು ಬಸವಣ್ಣ ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣ
ಬೆಂಗಳೂರು: ಜಗತ್ತಿಗೆ ಲೋಕತಂತ್ರ ವ್ಯವಸ್ಥೆಯನ್ನು ಪರಿಚಯಿಸಿದ ಜಗಜ್ಯೋತಿ ಬಸವೇಶ್ವರ ಹಾಗೂ ದಕ್ಷ, ದೂರದೃಷ್ಟಿಯ ಆಡಳಿತ ನಿರ್ವಹಿಸಿದ ನಾಡಪ್ರಭು ಕೆಂಪೇಗೌಡರು ಈ ನಾಡಿನ ಸಾಮಾಜಿಕ ನ್ಯಾಯ, ಸಮಗ್ರ ಸವಾರ್ಂಗೀಣ ವಿಕಾಸಕ್ಕೆ ಮುನ್ನುಡಿ ಬರೆದ ಮಹಾನ್ ಚೇತನಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ರವಿವಾರ ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ ಹಾಗೂ ‘ನಮ್ಮ ಬೆಂಗಳೂರು ಹಬ್ಬ-2023’ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಬಸವೇಶ್ವರ ಹಾಗೂ ಕೆಂಪೇಗೌಡ ಈ ಇಬ್ಬರು ಮಹಾನ್ ಚೇತನಗಳ ಪ್ರತಿಮೆಗಳು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪನೆಯಾಗಿರುವುದು ನಾಡಿಗೆ ಐತಿಹಾಸಿಕ ಸಂದರ್ಭವಾಗಿದೆ. ಬಸವಣ್ಣನವರ ಪ್ರತಿಮೆ ಸಮಗ್ರ ಜಗತ್ತಿಗೆ ಭಾರತವು ಲೋಕತಂತ್ರದ ಜನನಿ ಎಂಬ ಸಂದೇಶವನ್ನು ಸಾರಲಿದೆ ಎಂದು ಅವರು ಹೇಳಿದರು.
ಹನ್ನೆರಡನೆ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಮಾಜದ ಕೆಳಸ್ತರದಿಂದ ಉನ್ನತಸ್ಥರದಲ್ಲಿರುವವರಿಗೆಲ್ಲ ಒಂದೇ ವೇದಿಕೆ ಕಲ್ಪಿಸಿ, ಸಮಾಜದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ಮಾಡಲು ಅವಕಾಶ ಕೊಟಿದ್ದರು. ಅದೇ ರೀತಿ ಮಹಿಳೆಯರಿಗೂ ಸಮಾನ ಅವಕಾಶ ನೀಡಿದ್ದರು. ಅನೇಕ ಸಮಾಜದ ಮಹಿಳೆಯರು ಅನುಭವ ಮಂಟಪದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಿದ್ದರು ಎಂದು ಅಮಿತ್ ಶಾ ತಿಳಿಸಿದರು.
ಶಕ್ತಿಯು ಕೇವಲ ಅಬ್ಬರದ ಧ್ವನಿಯಲ್ಲಿರುವುದಿಲ್ಲ ವಿಚಾರಪೂರ್ಣ ಆಡಳಿತದಲ್ಲಿ ಇರುತ್ತದೆ. ವಿಜಯನಗರದ ಅಚ್ಯುತದೇವರಾಯರ ಸಾಮಂತರಾಗಿದ್ದ ಕೆಂಪೇಗೌಡ ಅಂತಹ ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಯುಗ ಯುಗಗಳ ವರೆಗೆ ಅವರ ಕೆಲಸಗಳು ಸ್ಮರಣೀಯವಾಗಿರುತ್ತವೆ. ಕೆರೆಗಳನ್ನು ನಿರ್ಮಿಸುವ ಮೂಲಕ ಜಗತ್ತಿಗೆ ನೀರಿನ ಮಹತ್ವವನ್ನು ಕೆಂಪೇಗೌಡ ಅರ್ಥ ಮಾಡಿಸಿದರು ಎಂದು ಅವರು ಹೇಳಿದರು.
ಕಲಾವಿದರು, ಸಾಹಿತಿಗಳು, ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ಮಹಾನ್ ವೇದಿಕೆ ಕಲ್ಪಿಸಿರುವ ಬೆಂಗಳೂರು ಹಬ್ಬ ನಡೆದಿರುವುದು ಸಂತಸದ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ರಕ್ಷಣೆ, ವಾಯುಯಾನದ ಉದ್ಯಮದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಅಮಿತ್ ಶಾ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಏಕೀಕರಣಗೊಂಡ ಮೊದಲ 10 ವರ್ಷಗಳಲ್ಲಿಯೆ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣನವರು ಹಾಗೂ ಕೆಂಪೇಗೌಡರ ಪ್ರತಿಮೆಗಳೂ ಸ್ಥಾಪನೆಯಾಗಬೇಕಿತ್ತು. ಆಧುನಿಕ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಸೌಧವಾಗಿರುವ ವಿಧಾನಸೌಧದಲ್ಲಿನ ಚರ್ಚೆಗಳಲ್ಲಿ ಹಾಗೂ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಬಸವಣ್ಣನವರ ಅನುಭವ ಮಂಟಪದ ವಿಚಾರಗಳ ಮೌಲ್ಯಗಳು ನಿರಂತರವಾಗಿ ಸಾಗಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮಿ, ಸುತ್ತೂರಿನ ಡಾ.ಶಿವರಾತ್ರಿದೇಶಿಕೇಂದ್ರ ಸ್ವಾಮಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ, ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀ, ವಚನಾನಂದ ಶ್ರೀ, ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮಿ, ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ, ಸಚಿವರಾದ ಆರ್.ಅಶೋಕ್, ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಆಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಮುನಿರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.