ಶಿಗ್ಗಾಂವಿ: ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ ಬಿಜೆಪಿಯ ಮಾಜಿ ಸಂಸದ ಮಂಜುನಾಥ್ ಕುನ್ನೂರು
ಹಾವೇರಿ, ಮಾ.27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕ್ಷೇತ್ರವಾದ ಶಿಗ್ಗಾಂವಿಯ ಮಾಜಿ ಸಂಸದ, ಪ್ರಭಾವಿ ಪಂಚಮಸಾಲಿ ಮುಖಂಡರೂ ಆಗಿರುವ ಮಂಜುನಾಥ್ ಕುನ್ನೂರು ಅವರು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಸಿಎಂ ಬೊಮ್ಮಾಯಿಗೆ ತವರು ಕ್ಷೇತ್ರದಲ್ಲಿ ಶಾಕ್ ನೀಡಿದ್ದಾರೆ.
ಮಂಜುನಾಥ್ ಕುನ್ನೂರು ಹಾಗೂ ಅವರ ಪುತ್ರ ರಾಜು ಕುನ್ನೂರು ಕೂಡಾ ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಸೋಮವಾರ = ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
1989ರಿಂದ 2 ಅವಧಿಗೆ ಶಿಗ್ಗಾಂವಿ ಶಾಸಕರಾಗಿದ್ದ ಮಂಜುನಾಥ್ ಕುನ್ನೂರು, ಬಿಜೆಪಿ ಸೇರಿ 2004ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಹ್ಲಾದ್ ಜೋಶಿ ವಿರುದ್ಧ ಸೋಲುಂಡಿದ್ದರು. 2018ರಲ್ಲಿ ಮತ್ತೆ ಬಿಜೆಪಿ ಸೇರಿದ್ದ ಅವರು ಇದೀಗ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಆ ಮೂಲಕ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಆಘಾತವನ್ನುಂಟು ಮಾಡಿದ್ದಾರೆ.