ಪತ್ನಿ, ಸಹೋದರ ವಿರುದ್ಧ ರೂ. 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ನವಾಝುದ್ದೀನ್ ಸಿದ್ದಿಕಿ
ಮುಂಬೈ: ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ (Nawazuddin Siddiqui) ಅವರು ತಮ್ಮ ಸಹೋದರ ಮತ್ತು ಪರಿತ್ಯಕ್ತ ಪತ್ನಿಯ ವಿರುದ್ಧ ರೂ. 100 ಕೋಟಿ ಪರಿಹಾರ ಕೋರಿ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ಬಾಂಬೆ ಹೈಕೋರ್ಟಿನಲ್ಲಿ ದಾಖಲಿಸಿದ್ದಾರೆ.
ಮೊಕದ್ದಮೆಯನ್ನು ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ಆರ್ ಐ ಚಗ್ಲಾ ಅವರ ಏಕಸದಸ್ಯ ಪೀಠದ ಮುಂದಿಡಲಾಗಿದ್ದು ಮಾರ್ಚ್ 30 ರಂದು ವಿಚಾರಣೆ ನಡೆಯುವ ಸಾಧ್ಯತೆಯಿದೆ.
ತಮ್ಮ ಸಹೋದರ ಶಂಸುದ್ದೀನ್ ಸಿದ್ದಿಕಿ ಹಾಗೂ ಪರಿತ್ಯಕ್ತ ಪತ್ನಿ ಅಂಜನಾ ಪಾಂಡೆ ಅಲಿಯಾಸ್ ಝೈನಾಬ್ ಸಿದ್ದಿಕಿ ತಮ್ಮ ವಿರುದ್ಧ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನವಾಝುದ್ದೀನ್ ತಮ್ಮ ವಕೀಲ ಸುನೀಲ್ ಕುಮಾರ್ ಮೂಲಕ ದಾಖಲಿಸಿರುವ ಮೊಕದ್ದಮೆಯಲ್ಲಿ ಹೇಳಿದ್ದಾರೆ.
"ಅರ್ಜಿದಾರರ (ನವಾಝುದ್ದೀನ್) ಅವರ ಮುಂಬರುವ ಚಿತ್ರಗಳು ಮುಂದೂಡಲ್ಪಟ್ಟಿವೆ. ಅವರ ವಿರುದ್ಧದ ಪೋಸ್ಟ್‌ಗಳು ಮತ್ತು ಲೇಖನಗಳು ಅದೆಷ್ಟು ಮಾನಹಾನಿಕರವಾಗಿವೆಯೆಂದರೆ ಅವರು ಸಾಮಾಜಿಕ ಕೂಟಗಳಲ್ಲಿ ಮತ್ತು ಸಾರ್ವಜನಿಕರೆದುರು ಬರಲು ನಾಚಿಕೆ ಪಟ್ಟುಕೊಳ್ಳುವಂತಾಗಿದೆ," ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ತಮ್ಮ ವಿರುದ್ಧ ಮಾಧ್ಯಮ ಅಥವಾ ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡುವುದರಿಂದ ತಮ್ಮ ಸಹೋದರ ಮತ್ತು ಪತ್ನಿಗೆ ತಡೆಯಾಜ್ಞೆ ವಿಧಿಸಬೇಕೆಂದು ನವಾಝುದ್ದೀನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಈಗಾಗಲೇ ಅವರು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆಯಲು ಹಾಗೂ ಪೋಸ್ಟ್‌ಗಳನ್ನು ತೆಗೆದುಹಾಕಲು ಆದೇಶಿಸಬೇಕೆಂದೂ ನವಾಝುದ್ದೀನ್ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ಪತ್ನಿ ಮತ್ತು ಸಹೋದರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ತಮ್ಮ ಹಣಕಾಸು ವ್ಯವಹಾರಗಳನ್ನು ಸಹೋದರನೇ ನಿರ್ವಹಿಸುತ್ತಿದ್ದುದರಿಂದ ತಮ್ಮ ಕಾರ್ಡ್‌ಗಳು, ಚೆಕ್‌ಪುಸ್ತಕಗಳು ಮತ್ತು ಬ್ಯಾಂಕ್ ಪಾಸ್‌ವರ್ಡ್‌ಗಳನ್ನು ಅವರಿಗೆ ನೀಡಿದ್ದು, ಆದರೆ ಸಹೋದರ ವಂಚಿಸಲು ಆರಂಭಿಸಿದ್ದರು ಎಂದು ನಟ ದೂರಿದ್ದಾರೆ. ನವಾಝುದ್ದೀನ್ ಹೆಸರಿನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಖರೀದಿಸುತ್ತಿರುವುದಾಗಿ ಹೇಳಿದ್ದ ಸಹೋದರ ವಾಸ್ತವವಾಗಿ ಅದನ್ನು ಜಂಟಿ ಹೆಸರುಗಳಲ್ಲಿ ಖರೀದಿಸಿದ್ದರು. ಈ ಕುರಿತು ಸಹೋದರನನ್ನು ಪ್ರಶ್ನಿಸಿದಾಗ ಆತ ತನ್ನ ಪತ್ನಿಯನ್ನು ತನ್ನ ವಿರುದ್ಧ ಸಿಡಿದೇಳುವಂತೆ ಹಾಗೂ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ ಎಂದು ನವಾಝುದ್ದೀನ್ ಆರೋಪಿಸಿದ್ದಾರೆ ಹಾಗೂ ಇಬ್ಬರೂ ರೂ. 21 ಕೋಟಿ ವಂಚಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಸಹೋದರ ಔಪಚಾರಿಕ ಮತ್ತು ಅನೌಪಚಾರಿಕ ಸಂಭಾಷಣೆಗಳನ್ನು ಆಡಿಯೋ ಮತ್ತು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದಾರೆ. ತಾವು ಲೆಕ್ಕಪರಿಶೋಧಕರೊಬ್ಬರನ್ನು ನೇಮಿಸಿಕೊಂಡಾಗ ತಮ್ಮ ಸಹೋದರನ ಕಾರಣದಿಂದ ಸರ್ಕಾರಕ್ಕೆ ರೂ. 37 ಕೋಟಿ ಬಾಕಿ ಇರಿಸುವಂತಾಗಿದೆ ಎಂದು ತಿಳಿದು ಬಂದಿದೆ ಎಂದು ನವಾಝುದ್ದೀನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಅಸಮಾಧಾನ