ಮದ್ದೂರು | ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಅಪಘಾತ: ಯುವತಿ ಮೃತ್ಯು, ಯುವಕ ಗಂಭೀರ
ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೊಂಡು ಎರಡು ವಾರಗಳು ಕಳೆಯುವ ಮುನ್ನವೇ ನಿರಂತರ ಅಪಘಾತಗಳ ಅಪಖ್ಯಾತಿಗೆ ಗುರಿಯಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ಶನಿವಾರ ಸಂಜೆ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟರೆ, ಬೈಕ್ ಸವಾರ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ತಮಿಳುನಾಡು ಮೂಲದ ಪ್ರಿಯಾಂಕರಾಜ್ (24) ಮೃತಪಟ್ಟ ಯುವತಿ. ಆಂಧ್ರ ಪ್ರದೇಶದ ನಿವಾಸಿ ಲಕ್ಷ್ಮಿನಾರಾಯಣಗೌಡ(25) ಎಂಬ ಯುವಕ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಹದ್ಯೋಗಿಗಳಾಗಿದ್ದ ಲಕ್ಷ್ಮಿ ನಾರಾಯಣಗೌಡ ಹಾಗೂ ಪ್ರಿಯಾಂಕರಾಜ್, ಬೆಂಗಳೂರಿನ ಟಿ.ಸಿ.ಎಸ್. ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ನಿಮಿತ್ತ ಮೈಸೂರಿಗೆ ತೆರಳಿ ಬೆಂಗಳೂರಿಗೆ ಬೈಕ್ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ದಶಪಥ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಇದೇ ಗೆಜ್ಜಲಗೆರೆ ಬಳಿ ಗೂಡ್ಸ್ ವಾಹನ ಮತ್ತು ಕಾರೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಮಡಿಕೇರಿ ಮೂಲದ ತಾಯಿ ಮತ್ತು ಪುತ್ರ ಸಾವನಪ್ಪಿದ್ದರು.