ಅದಾನಿ ಬಿಕ್ಕಟ್ಟಿನಲ್ಲಿ ಸರಕಾರ ಮಧ್ಯಪ್ರವೇಶಿಸಿಲ್ಲ ಎಂದ ಉನ್ನತ ಆರ್ಥಿಕ ಸಲಹೆಗಾರ
ಹೊಸದಿಲ್ಲಿ/ನ್ಯೂಯಾರ್ಕ್: ಅದಾನಿ ಗ್ರೂಪ್‌ನ ಅಮೆರಿಕದ ಶಾರ್ಟ್‌ಸೆಲ್ಲರ್‌ನೊಂದಿಗಿನ ಸಂಘರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಮಧ್ಯಪ್ರವೇಶಿಸಿಲ್ಲ ಎಂದು ಪ್ರಧಾನಿಯವರ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.
"ಸರಕಾರವು ಎಲ್ಲಿಯೂ ಮಧ್ಯಪ್ರವೇಶಿಸಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಯಾರೂ ಯಾರನ್ನೂ ರಕ್ಷಿಸಬೇಕಾಗಿಲ್ಲ” ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಸನ್ಯಾಲ್ ನ್ಯೂಯಾರ್ಕ್‌ನಲ್ಲಿ ಸಂದರ್ಶನವೊಂದರಲ್ಲಿ ಹೇಳಿದರು.
"ಮಾರುಕಟ್ಟೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕೆಲಸವಾಗಿದೆ. ನಾವು ಮಧ್ಯಪ್ರವೇಶಿಸುವುದಿಲ್ಲ. ಪಾರದರ್ಶಕತೆ ಮತ್ತು ಕ್ರಮಬದ್ಧವಾದ ಮಾರುಕಟ್ಟೆ ಚಲನೆಯು ನಾವು ಕಾಳಜಿವಹಿಸುವ ಏಕೈಕ ವಿಷಯವಾಗಿದೆ. ಅದನ್ನು ಉಳಿಸಿಕೊಂಡರೆ, ಬೆಲೆಗಳು ಕೆಲವೊಮ್ಮೆ ಹೆಚ್ಚಾಗುತ್ತವೆ, ಕೆಲವೊಮ್ಮೆ ಅವು ಕಡಿಮೆಯಾಗುತ್ತವೆ’’ ಎಂದು ಸನ್ಯಾಲ್ ಹೇಳಿದ್ದಾರೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ಜನವರಿ 24 ರ ವರದಿಯ ನಂತರ ಅದಾನಿ ಸಮೂಹದ ಕಂಪನಿಗಳ ಷೇರುಗಳು ಕುಸಿದಿದ್ದವು. ವರದಿಯಲ್ಲಿ ಅಂಬಾನಿ ಸಮೂಹದ ವಿರುದ್ಧ ವಂಚನೆ ಆರೋಪ ಹೊರಿಸಲಾಗಿತ್ತು. ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅವರ ನಿಯಂತ್ರಣದಲ್ಲಿರುವ ಗುಂಪು ಆರೋಪಗಳನ್ನು ನಿರಾಕರಿಸಿದೆ.