ಸಾಗರೋತ್ತರ ಶೆಲ್ ಕಂಪೆನಿಗಳ ಮಾಹಿತಿ ಇಲ್ಲ ಎಂದು ಸಂಸತ್ತಿಗೆ ತಿಳಿಸಿದ ಕೇಂದ್ರ
ಮಾಹಿತಿ ಇಲ್ಲದಿದ್ದರೆ ಸರಕಾರ ಅದಾನಿ ಸಂಸ್ಥೆ ವಿರುದ್ಧ ಹೇಗೆ ಕ್ರಮ ಕ್ರಮಕೈಗೊಳ್ಳಬಹುದು ಎಂದು ಪ್ರಶ್ನಿಸಿದ ಟಿಎಂಸಿ ಸಂಸದೆ
ಹೊಸದಿಲ್ಲಿ: ಭಾರತೀಯ ನಾಗರಿಕರ ಒಡೆತನದ ಸಾಗರೋತ್ತರ ಶೆಲ್ ಕಂಪೆನಿಗಳ (offshore shell firms) ಮಾಹಿತಿ ತನಗಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ವಾರ ಸಂಸತ್ತಿಗೆ ತಿಳಿಸಿದೆ.
ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಕೇಳಿದ್ದ ಪ್ರಶ್ನೆಯೊಂದಕ್ಕೆ ವಿತ್ತ ರಾಜ್ಯ ಸಚಿವ ಪಂಕಜ್ ಚೌಧುರಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಮೇಲಿನಂತೆ ತಿಳಿಸಿದ್ದರು.
ತಮ್ಮ ಸಚಿವಾಲಯದ ಪರಿಧಿಯಲ್ಲಿ ಬರುವ ಕಾನೂನುಗಳಲ್ಲಿ ಸಾಗರೋತ್ತರ ಕಂಪೆನಿ (ಆಫ್‌ಶೋರ್ ಕಂಪೆನಿ) ಕುರಿತು ವ್ಯಾಖ್ಯಾನವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಆದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಸ್ಟಾಕ್‌ಗಳ ಶೇಖರಣೆ, ಮಾರುಕಟ್ಟೆ ತಿರುಚುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ಸಾಗರೋತ್ತರ ಶೆಲ್ ಕಂಪೆನಿಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಹಿಂಡೆನ್‌ಬರ್ಗ್ ವರದಿಯ ಹಿನ್ನೆಲೆಯಲ್ಲಿ ಮೇಲಿನ ಪ್ರಶ್ನೆ ಕೇಳಲಾಗಿತ್ತು.
ಕೇಂದ್ರದ ಪ್ರತಿಕ್ರಿಯೆಯ ಬೆನ್ನಲ್ಲೇ ಬ್ರಿಟ್ಟಾಸ್ ಅವರು ಕೇಂದ್ರ ವಿತ್ತ ಸಚಿವಾಲಯದ 2018ರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಆಗ ಸಚಿವಾಲಯವು, ಶೆಲ್ ಕಂಪೆನಿಗಳ ಕುರಿತು ಪರಿಶೀಲಿಸಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಹೇಳಿತ್ತು.
"ಭಾರತ ಸರ್ಕಾರಕ್ಕೆ ಶೆಲ್ ಕಂಪೆನಿಯೆಂದರೇನು ಎಂದು ತಿಳಿದಿಲ್ಲವಾದರೆ, ಅದರ ಬಗ್ಗೆ ಅವರು ಹಿಂಧೆ ಹೇಗೆ ಟಾಸ್ಕ್ ಫೋರ್ಸ್ ರಚಿಸಿದ್ದರು, ಮಿಲಿಯನ್ ಡಾಲರ್ ಪ್ರಶ್ನೆ," ಎಂದು ಬ್ರಿಟ್ಟಾಸ್ ಪ್ರತಿಕ್ರಿಯಿಸಿದ್ದಾರೆ.
ಇದೇ ವಿಚಾರ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ "ಶೆಲ್ ಕಂಪೆನಿಯ ವ್ಯಾಖ್ಯಾನ ವಿತ್ತ ಸಚಿವಾಲಯಕ್ಕೆ ಗೊತ್ತಿಲ್ಲವೆಂದಾದರೆ ಸರ್ಕಾರವು ಅದಾನಿ ಸಂಸ್ಥೆಯ ಮೇಲೆ ಹೇಗೆ ಕ್ರಮ ಕ್ರಮಕೈಗೊಳ್ಳಬಹುದು, ರಾಜ್ಯಸಭೆಯಲ್ಲಿನ ಲಿಖಿತ ಉತ್ತರದಲ್ಲಿ ಸರ್ಕಾರ ಗೊತ್ತಿಲ್ಲ ಎಂದು ಹೇಳಿದೆ, ಆದುದರಿಂದ ಕ್ರಮವಿಲ್ಲ," ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಧಾರ್-ಪಾನ್ ಜೋಡಣೆಗೆ ಅಂತಿಮ ದಿನಾಂಕ ವಿಸ್ತರಣೆಯಾಗಿದೆಯೇ?: ಇಲ್ಲಿದೆ ವಾಸ್ತವ