ಸಿಎಂ ಬೊಮ್ಮಾಯಿ ಬಲಗೈ ಬಂಟ ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಮಾ.27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಬಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ ಮಂಜುನಾಥ್ ಕುನ್ನೂರ ಕಾಂಗ್ರೆಸ್ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ತನ್ನ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ, ಮಂಜುನಾಥ್ ಕುನ್ನೂರ ಲೋಕಸಭೆ ಮಾಜಿ ಸದಸ್ಯರು, ಮೂರು ಬಾರಿ ಶಾಸಕರಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬೇಷರತ್ ಸೇರಿದ್ದು, ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದರು.
ಜೆಡಿಎಸ್ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರಿದ್ದಾರೆ. ಇನ್ನು ಚಿಂತಾಮಣಿಯ ರಿಯಾಜ್ ಪಾಷಾ, ಮಹೇಶ್, ಭಾಸ್ಕರ್, ಕೃಷ್ಣಾ ರೆಡ್ಡಿ ಅಮರ್, ಮಹಮದ್ ಶಫಿವುಲ್ಲಾ, ಸಾಮ್ರಾಟ್, ಇರ್ಫಾನ್ ಖಾನ್, ಆರ್. ಪ್ರಸಾದ್, ವೆಂಕಟರೆಡ್ಡಿ, ನವೀನ್, ವಿಜಯ್, ಶ್ರೀನಿವಾಸ್ ಯಾದವ್ ಸೇರಿದಂತೆ ವಿವಿಧ ಸಮುದಾಯದ ಅನೇಕ ಮುಖಂಡರು ಪಕ್ಷ ಸೇರಿದ್ದಾರೆ. ಈ ಮೂಲಕ ಪಕ್ಷಕ್ಕೆ ಶಕ್ತಿ ಹೆಚ್ಚಿಸುತ್ತಿರುವ ಎಲ್ಲರಿಗೂ ಸ್ವಾಗತ ಕೋರುತ್ತೇನೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಅವರು ದೇಶದ ಪರವಾಗಿ ಸರಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅವರ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ನೂರಾರು ಮುಖಂಡ ಪಕ್ಷಕ್ಕೆ ಬಂದಿದ್ದು, ಹಳಬರು ಹೊಸಬರು ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕಿವಿಮಾತು ಹೇಳಿದರು.
ಸುಧಾಕರ್ ಅವರನ್ನು ನಾವು ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿದ್ದು, ನೀವೆಲ್ಲರೂ ಸೇರಿ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಕಾಂಗ್ರೆಸ್ ಸೇರಿದ್ದಾರೆ. ಆ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ವಕೀಲರಾಗಿ ಕೆಲಸ ಮಾಡಿಕೊಂಡು ಬಂದಿರುವ ದೇವರಾಜ್ ಸರಳ ಸಜ್ಜನ ವ್ಯಕ್ತಿ. ಅವರು ಯಾವುದೇ ಷರತ್ತು ಇಲ್ಲದೆ, ಇಂದು ಕಾಂಗ್ರೆಸ್ ಪಕ್ಷ ಸೇರಿರುವುದು ಖುಷಿ ತಂದಿದೆ ಎಂದರು.
ಶಿವಮೊಗ್ಗದ ಜೆಡಿಎಸ್ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕೂಡ ಪಕ್ಷಕ್ಕೆ ಬಂದಿದ್ದು, ಅವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ವಾಗತಿಸುತ್ತೇವೆ. ಗುಬ್ಬಿ ವಾಸು ಅವರು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರಲು ಅರ್ಜಿ ಹಾಕಲು ಬಂದಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಅಧಿಕಾರಕ್ಕೆ ಬಂದರೆ ಬಿಜೆಪಿಯ ಅಸಂಬದ್ಧ ಮೀಸಲಾತಿ ತೀರ್ಮಾನಗಳು ರದ್ದು: ‘ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು ಮೀಸಲಾತಿ ವಿಚಾರವಾಗಿ ಬೇಡಿಕೆ ಇಟ್ಟಿದ್ದು, ಬಿಜೆಪಿ ಮೀಸಲಾತಿ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಚಾರದಲ್ಲಿ ಸರಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಈ ಸರಕಾರದ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರಕಾರದ ಅಸಂಬದ್ಧ ಮೀಸಲಾತಿ ತೀರ್ಮಾನಗಳನ್ನು ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ’
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ