ಬಗರ್ ಹುಕುಂ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕು: ಮಧು ಬಂಗಾರಪ್ಪ
ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ(ಮಾ.27):ಮಾಜಿ ಸಿಎಂ ಬಂಗಾರಪ್ಪ ಅವರ ಮಗನಾಗಿ ಬಗರ್ ಹುಕುಂ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಳಗುಪ್ಪದಲ್ಲಿ ಅರಣ್ಯ ಇಲಾಖೆಯಿಂದ ರೈತರ ಸಾಗುವಳಿ ಭೂಮಿ ತೆರವು ಮಾಡಿದ ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ನ್ಯಾಯಾಲಯದ ಆದೇಶದಲ್ಲಿ ಮರಗಳನ್ನು ತೆರವು ಮಾಡಿ ಎಂದು ತಿಳಿಸಿಲ್ಲ. ಆದರೆ, ದುರುದ್ಧೇಶ ಪೂರ್ವಕವಾಗಿ ತೆರವು ಮಾಡಲಾಗಿದೆ. ಶಾಸಕ ಎಸ್. ಕುಮಾರ್ ಬಂಗಾರಪ್ಪ ಜನತೆಗೆ ಸುಳ್ಳು ಹೇಳುತ್ತಾ, ಹಾದಿ ತಪ್ಪಿಸುವ ಯತ್ನದಲ್ಲಿ ತೊಡಗಿದ್ದಾರೆ. ರೈತರಿಗೆ ರಕ್ಷಣೆ ನೀಡುವುದು ನಮ್ಮ ಹೊಣೆಯಾಗಿದ್ದು. ಬಗರ್ ಹುಕುಂ ಸಾಗುವಳಿ ರೈತರ ಪರವಾದ ಎಲ್ಲರೀತಿಯ ಹೋರಾಟಕ್ಕೂ ಸಿದ್ಧನಾಗಿರುವುದಾಗಿ ತಿಳಿಸಿದರು.
ಮಾಜಿ ಸಿಎಂ ಬಂಗಾರಪ್ಪನವರಿಗೆ ಅಧಿಕಾರ ನೀಡಿ ಕಾನೂನು ಮಾಡಿ ಎಂದು ಮುಖ್ಯಮಂತ್ರಿಯನ್ನಾಗಿ ಮಾಡಿದ್ರಿ,ಅವರು ಕಾನೂನು ಮಾಡಿಯು ಬಿಟ್ಟು ಹೋದರು ಆದರೆ ಇವತ್ತಿನ ಸ್ಥಿತಿ ಚಿಂತಾ ಜನಕವಾಗಿದೆ.ಈಗ ಬಂಗಾರಪ್ಪ ವಿರುದ್ಧನೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಸೌಧದಲ್ಲಿ ಕೂತ್ಕೊಂಡು ಕಾನೂನು ಬದಲಾವಣೆ ಮಾಡಿ,ಬಗರ್ ಹುಕುಂ ಹಾಗೂ ಅರಣ್ಯ ವಾಸಿಗಳ ಹಕ್ಕು ಪತ್ರ ಬಗ್ಗೆ ಭರವಸೆ ನೀಡಿದರು. ಈಗ ಎಲ್ಲಿ ಹೋದ್ರು,ನಾವು ಅವರಿಗೆ ಧಿಕ್ಕಾರ ಹೇಳಬೇಕು ಎಂದು ಮಧು ಬಂಗಾರಪ್ಪ ಜನರೊಂದಿಗೆ ಧಿಕ್ಕಾರ ಕೂಗಿದರು.
ನಾನು ಅಧಿಕಾರದಲ್ಲಿದ್ದಾಗ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ವಿತರಿಸಿದ್ದೆ.ನಾನು ಕೊಟ್ಟ ಹಕ್ಕನ್ನು ಈಗಿನ ಶಾಸಕ ಕುಮಾರ್ ಬಂಗಾರಪ್ಪ ವಜಾಗೊಳಿಸುತ್ತಾರೆ ಎಂದರೆ ನಾವು ಹೋರಾಡಬೇಕಾ ಬೇಡವಾ ಎಂದು ಪ್ರಶ್ನಿಸಿದರು.
ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ತಾಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್. ರಮೇಶ್, ಸೊರಬ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಪುರಸಭೆ ಸದಸ್ಯರಾದ ಶ್ರೀರಂಜನಿ ಪ್ರವೀಣ್ ಕುಮಾರ್, ಆಫ್ರೀನಾ, ಸುಲ್ತಾನ ಬೇಗಂ, ಮುಖಂಡರಾದ ಆರ್.ಸಿ. ಪಾಟೀಲ್, ಸಂಜೀವ ನೇರಲಗಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಂತ್ರಸ್ತ ಮಹಿಳೆಗೆ ಧನ ಸಹಾಯ
ತಾಳಗುಪ್ಪದಲ್ಲಿ ಅರಣ್ಯ ಇಲಾಖೆಯವರು ಒತ್ತುವರಿ ಮಾಡಿದ ಜಾಗವನ್ನು ತೆರವುಗೊಳಿಸಿದ ಘಟನೆಯಲ್ಲಿ ಆರ್ಥಿಕವಾಗಿ,ಮಾನಸಿಕ ನೊಂದ ಮಹಿಳೆಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷ ಮತ್ತು ಸೊರಬ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ನೀಡಿದ ಒಂದೇ ಒಂದು ಕರೆಗೆ ಸ್ಥಳದಲ್ಲಿಯೇ 2 ಲಕ್ಷದ 52 ಸಾವಿರದ 10 ರೂ.ಗಳನ್ನ ಸಂಗ್ರಹಿಸಿಕೊಟ್ಟರು.
ಆರಂಭದಲ್ಲಿ ಗಂಗಮ್ಮರನ್ನ ವೇದಿಕೆ ಮೇಲೆ ಕರೆಯಿಸಿ ಬಗುರ್ ಹುಕುಂ ಸಾಗುವಳಿ ಭೂಮಿ ಕಳೆದುಕೊಂಡು ಆರ್ಥಿಕವಾಗಿ ನಷ್ಟವಾಗಿದ್ದಾರೆ. ಅವರಿಗೆ ಆರ್ಥಿಕವಾಗಿ ನೆರವಾಗುತ್ತಿದ್ದು, ನಾನು ಮಹಿಳೆಗೆ ಧನ ಸಹಾಯ ಮಾಡುತ್ತಿದ್ದೇನೆ. ಒಂದು ರೂ. ಕೊಡುವಂತೆ ಪ್ರತಿಭಟನಕಾರರಿಗೆ ಮನವಿ ಮಾಡಿದರು.
ಮಧು ಬಂಗಾರಪ್ಪನವರ ಕರೆಗೆ ಪ್ರತಿಭಟನ ಕಾರರು ಪ್ರತಿಯಾಗಿ ಸ್ಥಳದಲ್ಲಿಯೇ 1 ಲಕ್ಷದ 52 ಸಾವಿರ ರೂ. ಸಂಗ್ರಹಿಸಿಕೊಟ್ಟರು. ಮಧು ಒಂದು ಲಕ್ಷ ರೂ. ಸೇರಿಸಿ 2,52,010 ರೂ. ಸಂಗ್ರಹಿಸಿ ನೀಡಿದರು.