ತಪ್ಪು ಗ್ರಹಿಕೆಯಿಂದ ನನ್ನ ನಿವಾಸದ ಮೇಲೆ ಕಲ್ಲು ತೂರಾಟ, ಯಾರನ್ನೂ ಬಂಧಿಸಬೇಡಿ: ಯಡಿಯೂರಪ್ಪ
ಬೆಂಗಳೂರು, ಮಾ. 27: ‘ತಪ್ಪು ಗ್ರಹಿಕೆ ಹಿನ್ನೆಲೆಯಲ್ಲಿ ಬಂಜಾರ ಸಮುದಾಯದ ಜನರು ಶಿಕಾರಿಪುರದಲ್ಲಿ ನನ್ನ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದು, ಯಾರ ಮೇಲೆಯೂ ಕ್ರಮ ಕೈಗೊಳ್ಳಬೇಡಿ’ ಎಂದು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಲ್ಲು ತೂರಾಟದ ಘಟನೆಯ ಹಿಂದೆ ಯಾರ ಪಿತೂರಿ ಇದೆ ಎನ್ನುವುದನ್ನು ಈ ಹಂತದಲ್ಲಿ ಹೇಳುವುದಿಲ್ಲ. ಎರಡು ದಿನದಲ್ಲಿ ಶಿಕಾರಿಪುರಕ್ಕೆ ನಾನೇ ಖುದ್ದು ತೆರಳಿ ಬಂಜಾರ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
ಶಿಕಾರಿಪುರದಲ್ಲಿ ಘಟನೆ ಸಂಭವಿಸಿದ ಕೂಡಲೇ ಎಸ್ಪಿ, ಡಿಸಿ ಜತೆ ಸಮಾಲೋಚನೆ ನಡೆಸಿದ್ದು, ಶಾಂತ ರೀತಿಯಿಂದ ಸಮಸ್ಯೆ ಪರಿಹರಿಸಿ, ಯಾರನ್ನೂ ಬಂಧಿಸದೆ ಕಳುಹಿಸಿಕೊಡಿ ತಿಳಿಸಿದ್ದೇನೆ. ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಆ ಸಮುದಾಯದ ಹಿರಿಯ ಮುಖಂಡರನ್ನು ಕರೆದು ಮಾತನಾಡುತ್ತೇನೆ. ಈ ಘಟನೆ ಏಕೆ ಆಯಿತು ಎಂದು ಚರ್ಚಿಸುತ್ತೇನೆ ಎಂದು ಹೇಳಿದರು.
‘ಶಿಕಾರಿಪುರ ಕ್ಷೇತ್ರದ ಜನತೆ ಶಾಂತಿ-ಸುವ್ಯವಸ್ಥೆಗೆ ಹೆಸರುವಾಸಿ. ಕ್ಷೇತ್ರದ ಜನತೆಯಲ್ಲಿ ಎಂದೂ ಗಲಾಟೆ ಮಾಡುವ ಗುಣವಿಲ್ಲ. ನಾಲ್ಕು ಬಾರಿ ಸಿಎಂ ಆಗಲು ಬಂಜಾರ ಸಮುದಾಯ ಕೊಡುಗೆ ಇದೆ. ಸಮಾಜಘಾತಕ ಶಕ್ತಿಗಳ ಮಾತುಕೇಳಿ ತಪ್ಪು ಹೆಜ್ಜೆ ಇರಿಸಬೇಡಿ. ನಿಮ್ಮ ಜೊತೆ ಇದ್ದು ನಿಮಗೆ ನ್ಯಾಯ ಒದಗಿಸುತ್ತೇನೆ’ ಎಂದು ಯಡಿಯೂರಪ್ಪ ಭರವಸೆ ನೀಡಿದರು.