ಆನ್ಲೈನ್ ಗೇಮ್ ವ್ಯಸನ: ಮನೆ ತೊರೆದಿದ್ದ ಚಿಕ್ಕಮಗಳೂರಿನ ಬಾಲಕ ಧರ್ಮಸ್ಥಳದಲ್ಲಿ ಪತ್ತೆ
ಚಿಕ್ಕಮಗಳೂರು, ಮಾ.27: ನಗರದ ಶಾಲೆಯೊಂದರ ಅಪ್ರಾಪ್ತ ವಯಸ್ಸಿನ ಮಕ್ಕಳು ಆನ್‌ಲೈನ್ ಗೇಮ್‌ಗಳ ವ್ಯಸನಕ್ಕೆ ಬಿದ್ದು, ಗೇಮ್‌ನ ಹಂತಗಳನ್ನು ಪೂರೈಸಲು ಒಬ್ಬರಾದ ಮೇಲೆ ಒಬ್ಬರಂತೆ ಊರು ಬಿಡಲು ಪ್ಲಾನ್ ಮಾಡಿದ್ದ ಆಘಾತಕಾರಿ ಘಟನೆ ವರದಿಯಾಗಿದೆ.
ಶಾಲೆಯ ಮೂವರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಕಳೆದ ಶುಕ್ರವಾರ ಸೈಕಲ್‌ನಲ್ಲಿ ಮನೆಯಿಂದ ಹೊರ ಹೋದವನು ನಂತರ ನಾಪತ್ತೆಯಾಗಿದ್ದ. ಬಾಲಕನ ಪೋಷಕರು ಆತಂಕದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯ ಮಧ್ಯೆ ಬಾಲಕ ಕುಟುಂಬಸ್ಥರಿಗೆ ಜಿಪಿಎಸ್ ಮೂಲಕ ಕರೆ ಮಾಡಿದ್ದು, ಆತ ಬೆಂಗಳೂರಿನಲ್ಲಿರುವುದು ಪತ್ತೆಯಾಗಿದೆ. ಬಾಲಕನ ಪತ್ತೆಗೆ ಪೊಲೀಸರು ಹಾಗೂ ಕುಟುಂಬಸ್ಥರು ಎಲ್ಲೆಡೆ ಹುಡುಕಾಡುತ್ತಿದ್ದ ಸಂದರ್ಭದಲ್ಲೇ ಬಾಲಕ ಧರ್ಮಸ್ಥಳಕ್ಕೆ ಬಂದಿಳಿದು ಒಂದು ದಿನ ಅಲ್ಲೇ ಕಾಲ ಕಳೆದಿದ್ದ. ಧರ್ಮಸ್ಥಳದಲ್ಲಿದ್ದ ವೇಳೆ ಒಮ್ಮೆ ಮೊಬೈಲ್ ಆನ್ ಮಾಡಿದ್ದರಿಂದ ಪೊಲೀಸರು ಲೊಕೇಶನ್ ಸರ್ಚ್ ಮಾಡಿದ್ದರಿಂದ ಬಾಲಕ ಧರ್ಮಸ್ಥಳದಲ್ಲಿರುವುದು ಪತ್ತೆಯಾಗಿದ್ದು ಸೋಮವಾರ ಚಿಕ್ಕಮಗಳೂರಿಗೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ಬಾಲಕ ಸೇರಿದಂತೆ ಆತನ ಸ್ನೇಹಿತರು ಮೊಬೈಲ್‌ನ ವ್ಯಸನಕ್ಕೆ ಬಿದ್ದು ವಿಡಿಯೋಗೇಮ್‌ನ ದಾಸರಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಘಟನೆ ಸಂಬಂಧ ಶಾಲೆಯ ಕೆಲ ಶಿಕ್ಷಕರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.
''7ನೇ ತರಗತಿ ವಿದ್ಯಾರ್ಥಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ವಿದ್ಯಾರ್ಥಿ ಸೋಮವಾರ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಿದಾಗ, ಸೈಕಲ್ ಸೇರಿ ದಂತೆ ಇತರ ವಸ್ತುಗಳನ್ನು ಕೊಂಡುಕೊಳ್ಳಲು ಹಣ ನೀಡುತ್ತಿರಲಿಲ್ಲ. ಬೇಸರಗೊಂಡು ಮನೆ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾನೆ. ಈ ವಿದ್ಯಾರ್ಥಿ ಹಣಗಳಿಸುವುದು ಹೇಗೆ ಎಂದು ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿದ್ದಾನೆ. ಹ್ಯಾಕಿಂಗ್, ಕೋಡಿಂಗ್ ಸೈಬರ್ ಸೆಕ್ಯೂರಿಟಿ ಬಗ್ಗೆ ಆಸಕ್ತಿ ಹೊಂದಿದ್ದು, ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಆನ್‍ಲೈನ್ ಗೇಮ್‍ಗಳನ್ನು ಆಡಿ ಹಣ ಗಳಿಸಿ ಸೈಕಲ್, ಮೊಬೈಲ್ ಕೊಂಡುಕೊಂಡಿರುವುದು ಹೇಳಿದ್ದಾನೆ. ಪೋಷಕರು ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಮಕ್ಕಳಿಗೆ ಸಮಯ ನೀಡಬೇಕು. ಪೋಷಕರ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಬೇಕು. ಈ ಸಂಬಂಧ ಪೋಷಕರಿಗೆ ತಿಳುವಳಿಕೆಯನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಮೂವರು ಬಾಲಕರಿದ್ದು, ಪರೀಕ್ಷೆ ಮುಗಿದ ಬಳಿಕ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು, ಬಾಲಕರಿಗೆ ಕೌನ್ಸಲಿಂಗ್ ಮಾಡಲಾಗುವುದು''
-ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.