ಅದಾನಿ ಶೇರುಗಳು ಕೆಂಪು ಪಟ್ಟಿಯಲ್ಲಿ ಅಂತ್ಯ: ರೂ. 30,000 ಕೋಟಿ ಮಾರುಕಟ್ಟೆ ಮೌಲ್ಯ ನಷ್ಟ
ಹೊಸ ದಿಲ್ಲಿ: ಇದೇ ಪ್ರಥಮ ಬಾರಿಗೆ ಕಳೆದ ಒಂದು ತಿಂಗಳಿಗೂ ಹೆಚ್ಚು ಅವಧಿಯಲ್ಲಿ ಮಾರ್ಚ್ 27, ಸೋಮವಾರದಂದು ಅದಾನಿ ಸಮೂಹದ ಎಲ್ಲ ಏಳು ಶೇರುಗಳ ಮೌಲ್ಯ ಕೆಂಪು ಪಟ್ಟಿಗೆ ಸೇರ್ಪಡೆಯಾಗಿದ್ದು, ಇದು ರೂ. 30,000 ಕೋಟಿ ಮಾರುಕಟ್ಟೆ ಮೌಲ್ಯದ ನಷ್ಟಕ್ಕೆ ಕಾರಣವಾಗಿದೆ ಎಂದು CNBCTV18 ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ನಷ್ಟದಿಂದ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಸುಮಾರು 9.4 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು ಗರಿಷ್ಠ ದಾಖಲೆಯ ರೂ. 24 ಲಕ್ಷ ಕೋಟಿಗಳಷ್ಟಿತ್ತು.
ಸೋಮವಾರದಂದು ಅದಾನಿ ಸಮೂಹದ ಶೇರು ಮೌಲ್ಯವು ಬಾಂಬೆ ಶೇರು ವಿನಿಮಯ ಮಾರುಕಟ್ಟೆಯಲ್ಲಿ ಶೇ. 0.99ರಷ್ಟು ಕುಸಿದು, ರೂ. 1723.30ಗೆ ತಲುಪಿತು.
ಬಾಂಬೆ ಶೇರು ವಿನಿಮಯ ಮಾರುಕಟ್ಟೆಯಲ್ಲಿ ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯದ ಶೇರು ಮೌಲ್ಯವು ಶೇ.1.43ರಷ್ಟು ಕುಸಿತ ಕಂಡು ರೂ. 629.10ಗೆ ತಲುಪಿದರೆ, ಅದಾನಿ ವಿದ್ಯುತ್ ಶೇರು ಮೌಲ್ಯವು ಶೇ. 4.98ರಷ್ಟು ಕುಸಿತ ಕಂಡು ರೂ. 183ಕ್ಕೆ ತಲುಪಿತು. ಅದಾನಿ ವಿದ್ಯುತ್ ಸರಬರಾಜು ಶೇರು ಮೌಲ್ಯವು ಶೇ. 4.98ರಷ್ಟು ನಷ್ಟ ಅನುಭವಿಸಿ ರೂ. 1069.20ಗೆ ತಲುಪಿದರೆ, ಅದಾನಿ ಹಸಿರು ಇಂಧನದ ಶೇರು ಮೌಲ್ಯವು ಶೇ. 4.40 ನಷ್ಟ ಅನುಭವಿಸಿ ರೂ. 984.70ಗೆ ಇಳಿಕೆಯಾಯಿತು. ಅದಾನಿ ಟೋಟಲ್ ಗ್ಯಾಸ್ ಶೇರು ಮೌಲ್ಯವು ಶೇ. 4.91 ನಷ್ಟ ಅನುಭವಿಸಿ, ರೂ. 958.35ಗೆ ತಲುಪಿದರೆ, ಅದಾನಿ ವಿಲ್ಮರ್ ಶೇರು ಮೌಲ್ಯವು ಶೇ. 4.93 ಕುಸಿತ ದಾಖಲಿಸಿ, ರೂ. 387.65ಕ್ಕೆ ತಲುಪಿತು.
ಶೇರು ಮೌಲ್ಯದ ಏರಿಕೆಯಲ್ಲಿ ಅಕ್ರಮವೆಸಲಾಗಿದೆ ಎಂದು ಜನವರಿ 24ರಂದು ಅಮೆರಿಕಾ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿ ಮಾಡಿದಾಗಿನಿಂದ ಅದಾನಿ ಸಮೂಹದ ಶೇರು ಮೌಲ್ಯವು ಪಾತಾಳಕ್ಕೆ ಕುಸಿದಿದ್ದು, ಅದರ ಶೇರುಗಳ ಮಾರಾಟದಿಂದ ಅದಾನಿ ಸಮೂಹವು ಈವರೆಗೆ 100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯದ ನಷ್ಟ ಅನುಭವಿಸಿದೆ.