ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು: ಸಿಎಂ ಬೊಮ್ಮಾಯಿ
ಬೆಂಗಳೂರು: ಅಂಬರೀಶ್ ಅಂದರೆ ಒಂದು ಶಕ್ತಿ. ಅವರ ವ್ಯಕ್ತಿತ್ವದಲ್ಲೇ ಆ ಶಕ್ತಿ ಇತ್ತು. ಅಂಬರೀಶ್ ಎಲ್ಲಿಯೇ ಹೋದರೂ ಸಂತೋಷ ಇರುತ್ತಿತ್ತು. ಗಂಭೀರ ಚರ್ಚೆ ಸಮಯದಲ್ಲೂ ಅಂಬರೀಶ್ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಸಂತೋಷ ಇರುತ್ತಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ದಿವಂಗತ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿ ಮಾತನಾಡಿದರು.
ಒಬ್ಬ ವ್ಯಕ್ತಿಗೆ ಆತ್ಮಸಾಕ್ಷಿಯಾಗಿ ಬದುಕು ನಡೆಸೋದು ಕಷ್ಟವಾದರೂ ಅಂಬರೀಶ್ ಅವರು ಸಹಜವಾಗಿ ಬದುಕನ್ನು ನಡೆಸಿದರು. ಅಂಬರೀಶ್ ತನಗೆ ಸರಿ ಅನ್ನಿಸಿದ್ದನ್ನು ಮಾಡುತ್ತಿದ್ದರು. ಆತ ತನ್ನ ಜೀವನದಲ್ಲಿ ಪಶ್ಚಾತ್ತಾಪ ಪಟ್ಟಿದ್ದೇ ಇಲ್ಲ. ಆತ ಚಲನಚಿತ್ರದಲ್ಲೂ ಕಷ್ಟ ಪಟ್ಟು ನಟನೆ ಮಾಡುತ್ತಿರಲಿಲ್ಲ. ಆತ ಸಹಜವಾಗಿ ತನ್ನ ಬದುಕಿನಲ್ಲಿ ಮುಂದೆ ಬಂದಿದ್ದರು. ಆತ ಯಾವುದನ್ನೂ ಬಯಸಿ ಪಡೆದುಕೊಂಡವನಲ್ಲ. ತನಗೆ ಸಿಕ್ಕಿದ್ದನ್ನೇ ಶ್ರೀಮಂತಗೊಳಿಸಿದರು. ಸಿನಿಮಾ ರಂಗದಲ್ಲಿ ಬಹಳಷ್ಟು ಜನರಿಗೆ ಸಹಾಯ ಸಿಕ್ಕಿದ್ದರೆ ಅದು ಅಂಬರೀಶ್ ಅವರಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.
''ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ''
ಅಂಬರೀಶ್ ರಾಜಕಾರಣಕ್ಕೆ ಬಂದಿದ್ದೂ ಆಕಸ್ಮಿಕವಾಗಿ. ಆತ ಯಾಕೆ ರಾಜಕಾರಣಕ್ಕೆ ಬಂದಿದ್ದು ಎಂದು ನನಗೆ ಗೊತ್ತು. ನಾವೆಲ್ಲರೂ ಸೇರಿ ರಾಮನಗರ ಉಪಚುನಾವಣೆಯಲ್ಲಿ ನಿಲ್ಲಿಸಿದ್ವಿ. 22 ದಿನ ಆತನ ಜತೆಯಲ್ಲೇ ಪ್ರಚಾರ ಮಾಡಿದ್ದೂ ನನಗೆ ನೆನಪಿದೆ. ಆತ ಸೋಲು ಗೆಲುವನ್ನು ಸಮನಾಗಿ ತೆಗೆದುಕೊಂಡಿದ್ದರು. ಯಾವುದೇ ಸ್ಥಾನಕ್ಕೆ ವ್ಯಾಮೋಹ ಇಲ್ಲೇ ಕೆಲಸ ಮಾಡಿದ್ದರು. ಕಾವೇರಿ ವಿಚಾರದಲ್ಲಿ ಒಂದು ಕ್ಷಣವೂ ಯೋಚನೆ ಮಾಡದೇ ರಾಜೀನಾಮೆ ಕೊಟ್ಟ ಸಂಸದ ಅಂಬರೀಶ್ ಒಬ್ಬರೇ. ಪ್ರಧಾನಿ ಮತ್ತೆ ಕರೆದರೂ ಅತ್ತ ತಿರುಗಿಯೂ ನೋಡಲಿಲ್ಲ. ಹಾಗಾಗಿ ಆತನ ನೆನಪು ಸದಾ ಚಿರಸ್ಥಾಯಿ ಆಗಿ ಉಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.