ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಕಾಲಿಟ್ಟ ಒಳ ಮೀಸಲಾತಿ ಕಿಚ್ಚು
ಕುಂಚೇನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು, ಬೆಂಕಿ ಹಚ್ಚಿ ಆಕ್ರೋಶ
ಶಿವಮೊಗ್ಗ, ಮಾ.28: ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಶಿಕಾರಿಪುರದಲ್ಲಿ ಭುಗಿಲೆದ್ದ ಬಂಜಾರ ಸಮಾಜದ ಆಕ್ರೋಶ ಇದೀಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೂ ಹಬ್ಬಿದೆ.
ಇಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕುಂಚೇನಹಳ್ಳಿ ತಾಂಡದ ಬಂಜಾರ ಸಮುದಾಯದವರು ರಾಷ್ಟ್ರೀಯ ಹೆದ್ದಾರಿ ತಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಹಾಗೂ ವಿವಿಧ ಸಮುದಾಯದ ವತಿಯಿಂದ ನಡೆದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಮನೆಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾನಿರತರ ಮಹಿಳೆಯರ ಮೇಲೆ ಹಲ್ಲೆಗಳು ನಡೆದಿತ್ತು.
ಈ ಘಟನೆಯ ಬೆನ್ನಲೇ ಕುಂಚೇನಹಳ್ಳಿ ತಾಂಡದ ಜನರು ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು, ರಸ್ತೆ ನಡುವೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ತಡೆಹಿಡಿಯಬೇಕು. ಇದು ಚುನಾವಣೆಗೋಸ್ಕರ ಸರಕಾರ ಗಿಮಿಕ್ ಮಾಡಿದೆ. ಕೂಡಲೇ ಸದಾಶಿವ ಆಯೋಗದ ಶಿಫಾರಸನ್ನು ತಡೆಹಿಡಿಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.