ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ಗಾಯಕನ ವಿರುದ್ಧ ಪ್ರಕರಣ ದಾಖಲು
ವಾರಣಾಸಿ: ಹೋಟೆಲ್ ಕೋಣೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ನಟಿ ಆಕಾಂಕ್ಷಾ ದುಬೆ (Akanksha Dubey) ಪ್ರಕರಣದ ಸಂಬಂಧ ಸೋಮವಾರ ಭೋಜಪುರಿ ಗಾಯಕ ಸಮರ್ ಸಿಂಗ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
25 ವರ್ಷದ ಭೋಜಪುರಿ ನಟಿ ಆಕಾಂಕ್ಷಾ ದುಬೆ ತಮ್ಮ ಹೋಟೆಲ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಾನಾಥ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಧರ್ಮಪಾಲ್ ಸಿಂಗ್, ಗಾಯಕ ಸಮರ್ ಸಿಂಗ್ ಹಾಗೂ ಅವರ ಸಹೋದರ ಸಂಜಯ್ ಸಿಂಗ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಾಗೂ ಇನ್ನಿತರ ಸೂಕ್ತ ಸೆಕ್ಷನ್‌ಗಳಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಟಿಯ ತಾಯಿ ಮಧು ದುಬೆ ಅವರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ಹೋಟೆಲ್ ಕೋಣೆಯಿಂದ ಯಾವುದೇ ಮರಣ ಪತ್ರ ದೊರೆತಿಲ್ಲ ಹಾಗೂ ಇದೊಂದು ಆತ್ಮಹತ್ಯೆ ಪ್ರಕರಣದಂತೆ ತೋರುತ್ತಿದೆ ಎಂದು ಸಾರಾನಾಥ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ರಾಯ್ ರವಿವಾರ ತಿಳಿಸಿದ್ದರು.
ಉತ್ತರ ಪ್ರದೇಶದ ಭಡೋಹಿ ಜಿಲ್ಲೆಯ ನಿವಾಸಿಯಾಗಿದ್ದ ಆಕಾಂಕ್ಷಾ ದುಬೆ ಸಿನಿಮಾವೊಂದರ ಚಿತ್ರೀಕರಣಕ್ಕೆಂದು ವಾರಾಣಸಿಗೆ ಆಗಮಿಸಿ, ಹೋಟೆಲ್ ಒಂದರಲ್ಲಿ ತಂಗಿದ್ದರು. ರವಿವಾರ ಮಧ್ಯಾಹ್ನವಾದರೂ ಆಕಾಂಕ್ಷಾ ದುಬೆ ಚಿತ್ರೀಕರಣಕ್ಕೆ ಬಾರದ್ದರಿಂದ ಆತಂಕಗೊಂಡ ಆಕೆಯ ಸಹೋದ್ಯೋಗಿಗಳು ಬಲವಂತವಾಗಿ ಕೋಣೆಯ ಅಸಲಿ ಕೀಯನ್ನು ಬಳಸಿ ಕೋಣೆಯ ಬಾಗಿಲು ತೆರೆಯುವಂತೆ ಹೋಟೆಲ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಕಾಂಕ್ಷಾ ದುಬೆ 'ಕಸಂ ಪೈದಾ ಕರ್ನೆ ವಾಲೆ ಕಿ 2', 'ಮುಝ್ಸೆ ಶಾದಿ ಕರೋಗಿ'(ಭೋಜಪುರಿ) ಹಾಗೂ 'ವೀರೋಂ ಕೆ ವೀರ್' ಸೇರಿದಂತೆ ಹಲವಾರು ಪ್ರಾದೇಶಿಕ ಚಿತ್ರಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: ಶಾರೂಖ್ ಜೊತೆ ʻಗೆಳೆತನʼ ಹೊಂದಿದ್ದಕ್ಕೆ ಪ್ರಿಯಾಂಕಾ ಚೋಪ್ರಾರನ್ನು ಬಾಲಿವುಡ್ ನಿಂದ ಬಹಿಷ್ಕರಿಸಿದ್ದ ಕರಣ್ ಜೋಹರ್: ಕಂಗನಾ ರಣಾವತ್