ಮೀನುಗಾರ ಮಹಿಳೆಯರಿಗೆ ಶಾಖ ನಿರೋಧಕ ಪೆಟ್ಟಿಗೆ ವಿತರಣೆ
ಮಂಗಳೂರು : ರಾಜ್ಯ ವಲಯ ಯೋಜನೆಯಡಿ ಮೀನುಗಾರ ಮಹಿಳೆಯರಿಗೆ ರಾಜ್ಯ ಸರಕಾರವು ಉಚಿತವಾಗಿ ನೀಡುವ ಶಾಖ ನಿರೋಧಕ ಪೆಟ್ಟಿಗೆಗಳನ್ನು ಶಾಸಕ ವೇದವ್ಯಾಸ ಕಾಮತ್ ನಗರದ ಸ್ಟೇಟ್‌ಬ್ಯಾಂಕ್ ಬಳಿಕ ಮೀನು ಮಾರುಕಟ್ಟೆಯಲ್ಲಿ ಇಂದು ಸಾಂಕೇತಿಕವಾಗಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರವು ಮೀನುಗಾರರ ಹಿತದೃಷ್ಟಿಯಿಂದ ವಿವಿಧ ಯೋಜನೆಗಳನ್ನು, ಜಾರಿಗೆ ತಂದಿದೆ. ಕೇಂದ್ರ ಸರಕಾರವು ಮತ್ಸ್ಯ ಸಂಪದ ಯೋಜನೆಯಡಿ ಆಳಸಮುದ್ರ ಮೀನುಗಾರಿಕೆ ನಡೆಸುವವರಿಗೆ ಬೋಟ್, ಇನ್ಸುಲೇಟೆಡ್ ವಾಹನಗಳ ಸಹಿತ ವಿವಿಧ ಯೋಜನೆಗಳನ್ನು ನೀಡುವ ಮೂಲಕ ಮೀನುಗಾರರ ಹಿತ ಕಾಪಾಡುವ ಕೆಲಸ ಮಾಡಿದೆ. ನಗರದ ಮೀನು ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಕೂಡ ವಿಶೇಷವಾಗಿ ಚಿಂತನೆ ನಡೆಸಲಾಗಿದ್ದು, ಸ್ಥಳೀಯ ಮೀನುಗಾರರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ನಾಡದೋಣಿಗಳಿಗೆ ಸೀಮೆ ಎಣ್ಣೆ, ನದಿ ಮೀನುಗಾರಿಕೆ ಮಾಡುವವರಿಗೆ ಬಲೆ, ಸಬ್ಸಿಡಿ ಡೀಸೆಲ್, ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಸ್ಕಾಲರ್ಶಿಪ್ ನೀಡುವ ಮೂಲಕ ಆಸರೆಯಾಗಿದೆ. ಸದ್ಯ ರಾಜ್ಯ ವಲಯ ಯೋಜನೆಯಡಿ ನಗರದ 160 ಮೀನು ಮಾರಾಟ ಮಹಿಳೆಯರಿಗೆ ಶಾಖ ನಿರೋಧಕ ಪೆಟ್ಟಿಗೆಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ರಾಜ್ಯ ಮೀನುಗಾರಿಕಾ ನಿಗಮದ ನಿಕಟಪೂರ್ವ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿದರು. ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ, ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರ, ಮೀನು ಮಾರಾಟಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಬೇಬಿ ಅಮೀನ್, ಹದಿನಾರು ಪಟ್ನ ಮೀನುಗಾರ ಸಂಯುಕ್ತ ಸಭಾದ ಉಪಾಧ್ಯಕ್ಷ ಸುಭಾಷ್ ಕಾಂಚನ್, ಮುಖಂಡರಾದ ಹೇಮಚಂದ್ರ ಸಾಲ್ಯಾನ್, ಸುಗಂಧಿ ಉಳ್ಳಾಲ್, ಮೋಹನ್, ಇಲಾಖೆಯ ಅಧಿಕಾರಿ ನಳಿನಿ ಮತ್ತಿತರರು ಉಪಸ್ಥಿತರಿದ್ದರು.