ಹಾಲಿ ಶಾಸಕರಿಗೆ ಟಿಕೆಟ್ ನೀಡುವಂತೆ ಪಟ್ಟು: ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಿದ ಎಂ.ಪಿ.ಕುಮಾರಸ್ವಾಮಿ ಬೆಂಬಲಿಗರು
ಚಿಕ್ಕಮಗಳೂರು, ಮಾ.28: ಮೂಡಿಗೆರೆ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಒಂದು ಬಣ ಪಟ್ಟು ಹಿಡಿದಿದ್ದರೆ, ಮತ್ತೊಂದು ಬಣ ಎಂ.ಪಿ.ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಉಳಿಸುವಂತೆ ಅಭಿಯಾನ ಆರಂಭಿಸಿದೆ.
ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಬಾರದು, ಹೊಸ ಮುಖಕ್ಕೆ ಟಿಕೆಟ್ ನೀಡಬೇಕು ಎಂಬ ಮುಸುಕಿನ ಗುದ್ದಾಟ ಕಳೆದ ಅನೇಕ ದಿನಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಜಯ ಸಂಕಲ್ಪ ಯಾತ್ರೆ ನಡೆಸುವ ವೇಳೆ ಬಣ ರಾಜಕೀಯ ಸ್ಫೋಟಗೊಂಡಿತ್ತು. ಎಂ.ಪಿ.ಕುಮಾರಸ್ವಾಮಿ ವಿರೋಧಿ ಬಣದ ಬಿಜೆಪಿ ಕಾರ್ಯಕರ್ತರು ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುನಿಸಿಕೊಂಡು ವಿಜಯ ಸಂಕಲ್ಪ ಯಾತ್ರೆಯನ್ನು ಅರ್ಧದಲ್ಲೇ ಮೊಟಕುಗಳಿಸಿ ಹಿಂದಿರುಗಿದ್ದರು.
ಘಟನೆಯ ಬೆನ್ನಲ್ಲೆ ವಿರೋಧಿ ಬಣದ ಕಾರ್ಯಕರ್ತರು ಎಂ.ಪಿ.ಕುಮಾರಸ್ವಾಮಿ ಅವರಿಗೆ ಪಕ್ಷದ ಟಿಕೆಟ್ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದಲ್ಲಿ ಪಕ್ಷದ ಪರ ಕೆಲಸ ಮಾಡುವುದಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮನೆಗೆ ಆಗಮಿಸಿ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಮನವಿ ಸಲ್ಲಿಸಿದ್ದರು.
ಮಂಗಳವಾರ ಎಂ.ಪಿ.ಕುಮಾರಸ್ವಾಮಿ ಬೆಂಬಲಿತ ಕಾರ್ಯಕರ್ತರು ಸಿ.ಟಿ.ರವಿ ಅವರ ನಿವಾಸಕ್ಕೆ ಆಗಮಿಸಿ, ಮೂಡಿಗೆರೆ ಕ್ಷೇತ್ರದಿಂದ ಎಂ.ಪಿ.ಕುಮಾರಸ್ವಾಮಿ ಯವರಿಗೆ ಪಕ್ಷ ಟಿಕೆಟ್ ನೀಡಿ, ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಉಳಿಸಬೇಕೆಂದು ಮನವಿ ಮಾಡಿದರು. ಎಂ.ಪಿ.ಕುಮಾರಸ್ವಾಮಿಯವರ ಪರ ವಿರೋಧದ ಬಣಗಳ ಮುಸುಕಿನ ಗುದ್ದಾಟ ಗುಟ್ಟಾಗಿರದೇ ಸಾರ್ವಜನಿಕವಾಗಿ ಬಹಿರಂಗವಾಗಿದ್ದು, ಪರ ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಟಿಕೆಟ್ ಸಂಬಂಧ ನಡೆಯುತ್ತಿರುವ ಈ ಗುದ್ದಾಟ ಬಿಜೆಪಿ ಮುಖಂಡರಿಗೆ ತಲೆನೋವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತೀರ್ಮಾನಕ್ಕೆ ಮುಖಂಡರು ಬರಲಿದ್ದಾರೆ ಕಾದು ನೋಡಬೇಕಿದೆ.