ಚಿಕ್ಕಮಗಳೂರು | ಅನುಮತಿ ಪಡೆಯದೆ ದರ್ಗಾ ನವೀಕರಣ ಆರೋಪ: ಕಾಮಗಾರಿಗೆ ಅಡ್ಡಿ
ಎರಡು ಗುಂಪಿನ ಜನರ ನಡುವೆ ವಾಗ್ವಾದ; ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
ಚಿಕ್ಕಮಗಳೂರು, ಮಾ.28: ಅನುಮತಿ ಇಲ್ಲದೇ ದರ್ಗಾ ನವೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಒಂದು ಗುಂಪಿನ ಜನರು ದರ್ಗಾ ಆವರಣದಲ್ಲಿ ನಡೆಯುತ್ತಿದ್ದ ಕಾಮಗಾರಿ ಅಡ್ಡಿಪಡಿಸಿದ್ದಲ್ಲದೇ ಸ್ಥಳದಲ್ಲಿದ್ದ ದರ್ಗಾ ಮುಜಾವರ್ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಮಂಗಳವಾರ ನಗರದ ಕೋಟೆ ಬಡಾವಣೆಯಲ್ಲಿ ವರದಿಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಕಾಲದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಗರದ ಕೋಟೆ ಬಡಾವಣೆಯಲ್ಲಿರುವ ದರ್ಗಾ ವಕ್ಫ್ ಬೋರ್ಡ್‍ನ ಅಧೀನದಲ್ಲಿದ್ದು, ದರ್ಗಾದ ಆಡಳಿತ ಮಂಡಳಿ ಸೂಚನೆ ಮೇರೆಗೆ ಮುಜಾವರ್ ಅವರು ದರ್ಗಾದ ಆವರಣದಲ್ಲಿ ಕೆಲ ದಿನಗಳಿಂದ ಶೆಡ್ ಹಾಗೂ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಮುಂದಾಗಿದ್ದರು. ಮಂಗಳವಾರ ದರ್ಗಾದ ಆವರಣಕ್ಕೆ ಆಗಮಿಸಿದ ಒಂದು ಗುಂಪಿನ ಜನರು ಅನುಮತಿ ಇಲ್ಲದೇ ಕಾಮಗಾರಿಗೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಮುಜಾವರ್ ಅವರೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೂ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಈ ಸುದ್ದಿ ತಿಳಿದ ಮತ್ತೊಂದು ಗುಂಪಿನ ಜನರು ದರ್ಗಾದ ಎದುರು ಜಮಾಯಿಸಿದ್ದರಿಂದ ಎರಡೂ ಗುಂಪಿನ ಜನರು ಮುಖಾಮುಖಿಯಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಕಾಲದಲ್ಲಿ ಖುದ್ದು ಎಸ್ಸಿ ಉಮಾಪ್ರಶಾಂತ್ ನೇತೃತ್ವದಲ್ಲಿ ಪೊಲೀಸರುವ ಮಧ್ಯೆ ಪ್ರವೇಶಿಸಿ ಸ್ಥಳದಲ್ಲಿದ್ದ ಜನರನ್ನು ಚದುರಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಡಿಎಆರ್ ತುಕಡಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ವೇಳೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಎಸ್ಪಿ ಉಮಾ ಪ್ರಶಾಂತ್ ಎರಡೂ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವಹಿಸುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.
ದರ್ಗಾದ ಆಡಳಿತ ಮಂಡಳಿ ಸೂಚನೆಯಂತೆ ದರ್ಗಾದ ಎದುರು ಗ್ರಿಲ್ ಹಾಕಿಸುವ ಕೆಲಸ ಕೈಗೊಳ್ಳಲಾಗಿತ್ತು. ಇದಕ್ಕೆ ಕೆಲವರು ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕಾಮಗಾರಿಗೆ ಅನುಮತಿ ಕೊಡಿಸುವುದ ಆಡಳಿತ ಮಂಡಳಿ ಅಥವಾ ವಕ್ಫ್ ಬೋರ್ಡ್‍ನ ಕೆಲಸ. ನೌಕರನಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲ ಧರ್ಮದವರು ಈ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಹಿಂದೆಂದೂ ಇಲ್ಲದ ವಿವಾದ ಈಗ ಏಕೆ ಸೃಷ್ಟಿಯಾಗಿದೆ ಎಂದು ಗೊತ್ತಿಲ್ಲ.
- ದರ್ಗಾದ ಮುಜಾವರ್
ನಗರದಲ್ಲಿರುವ ಯಾವುದೇ ದೇವಾಲಯ, ದರ್ಗಾ, ಮಸೀದಿ, ಚರ್ಚ್‍ಗಳಲ್ಲಿ ಯಾವುದೇ ಕಾಮಗಾರಿ ನಡೆಸಬೇಕಿದ್ದರೂ ನಗರಸಭೆ ಅನುಮತಿ ಕಡ್ಡಾಯ. ಈ ಸಂಬಂಧ ಎಲ್ಲ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ. ಕೋಟೆ ದರ್ಗಾದ ಕಾಮಗಾರಿಗೆ ಅನುಮತಿ ಪಡೆದಿಲ್ಲ. ಈ ಸಂಬಂಧ ನಗರಸಭೆ ಕಚೇರಿಯಲ್ಲಿ ಎರಡೂ ಸಮುದಾಯದವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮವಹಿಸಲಾಗುವುದು. ದರ್ಗಾದ ಜಾಗವನ್ನು ಸರ್ವೆ ಮಾಡಿಸಿ ಹೆಚ್ಚುವರಿ ಜಮೀನನನ್ನು ನಗರಸಭೆ ವಶಕ್ಕೆ ಪಡೆಯಲಾಗುವುದು.
- ವೇಣುಗೋಪಾಲ್, ನಗರಸಭೆ ಅಧ್ಯಕ್ಷ
ದರ್ಗಾದ ಕಾಮಗಾರಿ ವಿಚಾರ ಸಂಬಂಧ ಗೊಂದಲ ಸೃಷ್ಟಿಯಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಎರಡೂ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ಬಗೆಹರಿಸಿಕೊಳ್ಳಲು ಸೂಚನೆಯಾಗಿದೆ. ಗಲಾಟೆಗೆ ಅವಕಾಶ ನೀಡಬಾರದು ಎಂದು ಎರಡೂ ಸಮುದಾಯದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
- ಉಮಾ ಪ್ರಶಾಂತ್, ಎಸ್ಪಿ