ಮಂಗಳೂರು: ಪಾಲಿಕ್ಲಿನಿಕ್ ನ ನೂತನ ಕಟ್ಟಡ ಲೋಕಾರ್ಪಣೆ

ಮಂಗಳೂರು : ಇಲ್ಲಿನ ಕೊಡಿಯಾಲ್ ಬೈಲ್ನ ಜೈಲ್ ರಸ್ತೆಯಲ್ಲಿ ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ನೂತನ ಕಟ್ಟಡವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಮನುಷ್ಯನಿಗೆ ಸಿಗುವಂತೆಯೆ ಜಾನುವಾರುಗಳಿಗೆ ಅತ್ಯಾಧುನಿಕ ರೀತಿಯ ಚಿಕಿತ್ಸೆ ನೀಡುವ ರೀತಿಯಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಸರಕಾರ ಪಾಲಿಕ್ಲಿನಿಕ್ ವ್ಯವಸ್ಥೆಯನ್ನು ಅನುಷ್ಠಾಗೊಳಿಸಿದೆ. ಹಿಂದೆ ಜಾನುವಾರುಗಳಿಗೆ ಕಾಯಿಲೆ ಬಂದಾಗ ಔಷಧಿ ನೀಡುವ ವ್ಯವಸ್ಥೆ ಮಾತ್ರ ಇತ್ತು. ಇದೀಗ ಶಸ್ತ್ರಚಿಕಿತ್ಸೆ , ಎಕ್ಸರೇ ಆಪರೇಷನ್ ಥಿಯೆಟರ್ ಮತ್ತಿತರ ವ್ಯವಸ್ಥೆ ಬಂದಿದೆ. ಪಾಲಿಕ್ಲಿನಿಕ್ನಲ್ಲಿ ಇಂತಹ ಸೌಲಭ್ಯಗಳು ಲಭ್ಯ ಎಂದು ಹೇಳಿದರು.
ಜಿಲ್ಲಾ ಪಾಲಿಕ್ಲಿನಿಕ್ನ ಉಪನಿರ್ದೇಶಕ ಡಾ.ಎ.ಬಿ.ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಲಿಕ್ಲಿನಿಕ್ 25 ವರ್ಷಗಳ ಹಿಂದಿನ ಚಿಂತನೆಯಾಗಿದೆ. ಪಶುಗಳಿಗೆ ವಿಶೇಷ ಚಿಕಿತ್ಸೆ ನೀಡುವ ಪಾಲಿಕ್ಲಿನಿಕ್ 2014-15ರಲ್ಲಿ ಮಂಗಳೂರಿಗೆ ಪಾಲಿಕ್ಲಿನಿಕ್ ಮಂಜೂರಾಗಿತ್ತು. ತಜ್ಞಪಶುವೈದ್ಯರ ಸೇವೆಯನ್ನು ವಿಸ್ತರಿಸುವುದು ಈ ಕ್ಲಿನಿಕ್ನ ಉದ್ದೇಶವಾಗಿದೆ. ಹಳ್ಳಿಯಲ್ಲಿ ಸಿಗದ ಸೇವೆಯನ್ನು ಇದರ ಮೂಲಕ ನೀಡಲಾಗುತ್ತದೆ. ಲ್ಯಾಬ್, ಸ್ಕ್ಯಾನಿಂಗ್, ವ್ಯವಸ್ಥೆ ಇರುತ್ತದೆ. ಪಶು ಸಂಗೋಪನಾ ಇಲಾಖೆಯಲ್ಲಿ ಮಂಜೂರಾದ 12 ಹುದ್ದೆಗಳಲ್ಲಿ 3 ಮಾತ್ರ ಭರ್ತಿಯಾಗಿದೆ ಎಂದು ಮಾಹಿತಿ ನೀಡಿದರು.