ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನಾ (ಸ್ವಾ.) ಕೇಂದ್ರವಾಗಿ ತೆಂಕನಿಡಿಯೂರು ಕಾಲೇಜು ಆಯ್ಕೆ
ಉಡುಪಿ, ಮಾ.28: ಇಲ್ಲಿನ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಗುರುತಿಸಿಕೊಂಡ ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರವು ಮಂಜೂರಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ರಾದ ಡಾ.ಸುರೇಶ್ ರೈ ಕೆ. ತಿಳಿಸಿದ್ದಾರೆ.
2020-21ನೇ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ವಿವಿಯ ಸ್ನಾತಕೋತ್ತರ ಮತ್ತು ಪದವಿ ವಿಭಾಗಗಳಲ್ಲಿ ಒಟ್ಟು 9 ರ್ಯಾಂಕ್ ಗಳಿಸಿರುವ ಹಾಗೂ ಕಳೆದ ಐದು ಶೈಕ್ಷಣಿಕ ವರ್ಷಗಳಲ್ಲಿ ರಾಜ್ಯಾದ್ಯಂತ ಇರುವ 431 ಸರಕಾರಿ ಕಾಲೇಜುಗಳಲ್ಲಿಯೇ ಅತ್ಯಂತ ಉತ್ತಮ ಫಲಿತಾಂಶಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಯಿಂದ ಕಳೆದ ಸುಶಾಸನ ದಿನಾಚರಣೆಯಂದು ಗೌರವಿಸಲ್ಪಟ್ಟ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಿರೀಟಕ್ಕೆ ಇದು ಇನ್ನೊಂದು ಗರಿಯಾಗಿದೆ.
ಸ್ವಾಯತ್ತ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರವಾಗಿ ಆಯ್ಕೆಯಾದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಏಕೈಕ ಸರಕಾರಿ ಕಾಲೇಜು ಇದಾಗಿದೆ. ಪಿಎಚ್ಡಿ ಸಂಶೋಧನೆಯನ್ನು ಮಾಡಲು ಮುಂದಿನ 4 ವರ್ಷಗಳ ಅವಧಿಗೆ ಅನುಮತಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯವು ಅನುಮತಿ ನೀಡಿದ್ದು, ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ಇಂಗ್ಲೀಷ್, ಕನ್ನಡ, ಸಮಾಜಶಾಸ್ತ್ರ, ಸಮಾಜಕಾರ್ಯ ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಕೋರ್ಸುಗಳ ಜೊತೆಗೆ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ ಹಾಗೂ ಬಿ.ಎಸ್.ಡಬ್ಲ್ಯೂ ಪದವಿ ವಿಭಾಗಗಳಿವೆ.
2006ರಿಂದ ಈವರೆಗೆ ಸ್ನಾತಕೋತ್ತರ ಹಾಗೂ ಪದವಿ ವಿಭಾಗಗಳಲ್ಲಿ ಮಂಗಳೂರು ವಿವಿಯ ಒಟ್ಟು 46 ರ್ಯಾಂಕುಗಳನ್ನು ಪಡೆದಿರುವ ಕಾಲೇಜಿಗೆ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ ನಿಟ್ಟೆ ವಿವಿಯ ಕುಲಪತಿ ಹಾಗೂ ಕುಲಸಚಿವರಿಗೆ ಕಾಲೇಜಿನ ಪ್ರಾಂಶುಪಾಲರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.