ಪಂಜಾಬ್‌ಗೆ ಮರಳಿದ ಅಮೃತ್‌ಪಾಲ್ ?: ಹೊಶಿಯಾರ್‌ಪುರದಲ್ಲಿ ಶೋಧ
ಹೊಸದಿಲ್ಲಿ: ಖಾಲಿಸ್ತಾನ ಬೆಂಬಲಿಗ ಅಮೃತ್‌ಪಾಲ್ ಬಂಧನಕ್ಕೆ ಹರಸಾಹಸ ನಡೆಸಿರುವ ಪಂಜಾಬ್ ಪೊಲೀಸರು ಮಂಗಳವಾರ ತಡರಾತ್ರಿ ಹೊಶಿಯಾರ್‌ಪುರದ ಮರ್ನಿಯಾನ್ ಕಲನ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುದ್ವಾರ ಬಳಿ ಬಿಟ್ಟುಹೋಗಿದ್ದ ಟೊಯೊಟೊ ಇನ್ನೊವಾ ಪತ್ತೆಯಾಗಿದ್ದು, ಇದು ಅಮೃತ್‌ಪಾಲ್ ಬಳಸಿದ ವಾಹನವಿರಬೇಕು ಎಂಬ ಶಂಕೆ ಬಲವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ತಂಡ ಮೂವರನ್ನು ಕರೆದೊಯ್ಯುತ್ತಿದ್ದ ಇನ್ನೋವಾ ವಾಹನವನ್ನು ಪಗ್ವಾಡ-ಹೊಶಿಯಾರ್‌ಪುರ ರಸ್ತೆಯಲ್ಲಿ ಬೆನ್ನಟ್ಟಿದರು. ಈ ಮೂವರ ಪೈಕಿ ಒಬ್ಬ ಅಮೃತ್‌ಪಾಲ್ ಎಂಬ ಸಂದೇಹ ಇದ್ದು, ರಾತ್ರಿ 8.30ರ ಸುಮಾರಿಗೆ ಗ್ರಾಮದ ಗುರುದ್ವಾರ ಭಾಯ್ ಚಂಚಲ್ ಸಿಂಗ್ ಬಳಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಗುರುದ್ವಾರದ ಹೊರ ಗೋಡೆಯನ್ನು ಈ ಮೂವರು ಏರುತ್ತಿರುವುದನ್ನು ನೋಡಿದ್ದಾಗಿ ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ತಕ್ಷಣ ಆಗಮಿಸಿದ ಪೊಲೀಸರು ಗ್ರಾಮದ ಪ್ರತಿ ಮನೆಯನ್ನು ಶೋಧಿಸಿದರು. ಹೊಲಗಳಲ್ಲಿ ಕೂಡಾ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, 11 ದಿನಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ಅಮೃತ್‌ಪಾಲ್ ಅವರನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ.
ಇದಕ್ಕೂ ಮುನ್ನ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ಗೆ ಹೇಳಿಕೆ ಸಲ್ಲಿಸಿರುವ ಪಂಜಾಬ್ ಸರ್ಕಾರ, ಅಮೃತ್‌ಪಾಲ್ ಅವರ ಬಂಧನ ಸನ್ನಿಹಿತವಾಗಿದೆ ಎಂದು ಹೇಳಿದೆ. ಸರ್ಕಾರ ತೀರಾ ಸೂಕ್ಷ್ಮ ಹಂತದಲ್ಲಿದೆ. ಇತರ ಭದ್ರತಾ ಏಜೆನ್ಸಿಗಳ ಜತೆ ಸಮ್ವಯ ಸಾಧಿಸಿ ಆತನನ್ನು ಬಂಧಿಸುವ ಹಂತದಲ್ಲಿದ್ದೇವೆ" ಎಂದು ಅಡ್ವೊಕೇಟ್ ಜನರಲ್ ವಿನೋದ್ ಘಾಯ್ ಸ್ಪಷ್ಟಪಡಿಸಿದ್ದಾರೆ.