'ನನ್ನ ಮನೆ ರಾಹುಲ್ ಗಾಂಧಿ ಮನೆ': ಬಿತ್ತಿಫಲಕ ಅಂಟಿಸಿದ ವಾರಾಣಸಿ ಕಾಂಗ್ರೆಸ್ ನಾಯಕ
ವಾರಾಣಸಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬೆನ್ನಿಗೇ ದಿಲ್ಲಿಯಲ್ಲಿನ ತಮ್ಮ ಅಧಿಕೃತ ಬಂಗಲೆ ತೊರೆಯಬೇಕು ಎಂದು ನಿರ್ದೇಶಿಸಲ್ಪಟ್ಟಿರುವ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಾಗಿ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಅಜಯ್ ರಾಯ್ ಎಂಬುವವರು ತಮ್ಮ ನಿವಾಸವನ್ನು ಸಾಂಕೇತಿಕವಾಗಿ ಮೀಸಲಿಟ್ಟಿದ್ದಾರೆ.
ವಾರಾಣಸಿಯ ಲಹುರಾಬಿರ್ ಪ್ರದೇಶದಲ್ಲಿರುವ ತನ್ನ ನಿವಾಸದ ಮೇಲೆ "ನಮ್ಮ ಮನೆ ಶ್ರೀ ರಾಹುಲ್ ಗಾಂಧಿ ಮನೆ" ಎಂಬ ಭಿತ್ತಿಫಲಕವನ್ನು ಮಾಜಿ ಶಾಸಕ ಹಾಗೂ ಅವರ ಪತ್ನಿ ತಮ್ಮ ನಿವಾಸದ ಮುಂದೆ ಲಗತ್ತಿಸಿದ್ದಾರೆ.
ತಮ್ಮ ಅಧಿಕೃತ ನಿವಾಸವನ್ನು ತೊರೆಯುವಂತೆ ಲೋಕಸಭಾ ಕಾರ್ಯಾಲಯ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ತಾವು ನೋಟಿಸ್‌ಗೆ ಬದ್ಧವಾಗಿರುವುದಾಗಿ ತಿಳಿಸಿದ ಬೆನ್ನಿಗೇ ಈ ನಡೆ ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್ ರಾಯ್, "ದೇಶದ ಸರ್ವಾಧಿಕಾರಿಯು ನಮ್ಮ ನಾಯಕನ ನಿವಾಸ ಕಸಿದುಕೊಳ್ಳಲು ಬಯಸಿದ್ದಾರೆ. ಆದರೆ, ಅವರಿಗೆ ದೇಶಾದ್ಯಂತ ಇರುವ ಪಕ್ಷದ ಕೋಟ್ಯಂತರ ಕಾರ್ಯಕರ್ತರ ನಿವಾಸಗಳೂ ರಾಹುಲ್ ಗಾಂಧಿ ನಿವಾಸವೇ ಎಂಬುದು ತಿಳಿದಿಲ್ಲ. ಬಾಬಾ ವಿಶ್ವನಾಥ್ ನಗರದ ಲಾಹುರಾಬಿರ್ ಪ್ರದೇಶದಲ್ಲಿನ ನನ್ನ ನಿವಾಸವನ್ನು ರಾಹುಲ್ ಗಾಂಧಿಗೆ ಮೀಸಲಿಟ್ಟಿದ್ದೇನೆ" ಎಂದು ಹೇಳಿದ್ದಾರೆ.
ಈ ಅಭಿಯಾನವು ರಾಹುಲ್ ಗಾಂಧಿಯನ್ನು ಬೆಂಬಲಿಸಿ ಕಾಶಿ ಸೇರಿದಂತೆ ಪ್ರಯಾಗ್‌ರಾಜ್ ಉದ್ದಕ್ಕೂ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
"ಗಾಂಧಿ ಕುಟುಂಬವು ಪ್ರಯಾಗ್‌ರಾಜ್‌ನಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆನಂದ ಭವನ್ ಅನ್ನು ದೇಶಕ್ಕೆ ಸಮರ್ಪಿಸಿತ್ತು. ರಾಹುಲ್ ಗಾಂಧಿಗೆ ಮನೆ ತೆರವುಗೊಳಿಸುವಂತೆ ನೀಡಿರುವ ನೋಟಿಸ್ ಬಿಜೆಪಿಯ ಹೇಡಿತನದ ಕ್ರಮವಾಗಿದೆ" ಎಂದು ಅಜಯ್ ರಾಯ್ ಟೀಕಿಸಿದ್ದಾರೆ.
2019 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್, ಪರಾಭವಗೊಂಡಿದ್ದರು.