ಮಾ.31ರಿಂದ SSLC ಪರೀಕ್ಷೆ ಆರಂಭ: 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
ಬೆಂಗಳೂರು, ಮಾ.29: ಪ್ರಸಕ್ತ ವರ್ಷದ ಎಸೆಸೆಲ್ಸಿ ಮುಖ್ಯ ಪರೀಕ್ಷೆಯು ಮಾ.31ರಿಂದ ಎ.15ರ ವರೆಗೆ ನಡೆಯಲಿದ್ದು, ಸುಮಾರು 8,42,811 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
5,833 ಸರಕಾರಿ ಶಾಲೆಗಳಿಂದ 3,60,862 ವಿದ್ಯಾರ್ಥಿಗಳು, 3,605 ಅನುದಾನಿತ ಶಾಲೆಗಳಿಂದ 2,20,831 ವಿದ್ಯಾರ್ಥಿಗಳು ಹಾಗೂ 6060 ಖಾಸಗಿ ಶಾಲೆಗಳಿಂದ 2,61,118 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. 7,94,611 ವಿದ್ಯಾರ್ಥಿಗಳುಪ್ರಥಮ ಬಾರಿಗೆ ಪರೀಕ್ಷೆಯನ್ನು ತೆಗೆದುಕೊಂಡಿದ್ದು, 20,750 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದೆ.
ಖಾಸಗಿಯಾಗಿ 18,272 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ. 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳಾ 316 ಮಂದಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ.
3,305 ಕೇಂದ್ರಗಳಲ್ಲಿ ಪರೀಕ್ಷೆ: ಎಸೆಸೆಲ್ಸಿ ಪರೀಕ್ಷೆಯು ಒಟ್ಟು 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಇವುಗಳಲ್ಲಿ 1,845 ರೆಗ್ಯುಲರ್ ಕ್ಲಸ್ಟರ್ ಪರೀಕ್ಷಾ ಕೇಂದ್ರಗಳಾಗಿವೆ. 1,354 ರೆಗ್ಯುಲರ್-ನಾನ್ ರೆಗ್ಯುಲರ್ ಕ್ಲಸ್ಟರ್ ಪರೀಕ್ಷಾ ಕೇಂದ್ರಗಳಾಗಿವೆ. 106 ಖಾಸಗಿ ಪರೀಕ್ಷಾ ಕೇಂದ್ರಗಳಾಗಿವೆ ಎಂದು ಮಂಡಳಿಯು ತಿಳಿಸಿದೆ.
ವೇಳಾಪಟ್ಟಿ: ಮಾ.31ರಂದು ಪ್ರಥಮ ಭಾಷೆ ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕøತ ಪರೀಕ್ಷೆಗಳು ಹಾಗೂ ಎ.4ರಂದು ಗಣಿತ ಪರೀಕ್ಷೆ ನಡೆಯಲಿದೆ. ಎ.6ರಂದು ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಹಾಗೂ ಎ.10ರಂದು ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಎ.12ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕøತ, ಕೊಂಕಣಿ ಹಾಗೂ ತುಳು ಪರೀಕ್ಷೆಗಳು ಹಾಗೂ ಎ.15ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.