ಮಾ.31ರಿಂದ ಎಸೆಸೆಲ್ಸಿ ಪರೀಕ್ಷೆ: ದ.ಕ.ಜಿಲ್ಲೆಯ 29,572 ವಿದ್ಯಾರ್ಥಿಗಳ ನೋಂದಣಿ

ಮಂಗಳೂರು, ಮಾ.29: ಎಸೆಸೆಲ್ಸಿ ಪರೀಕ್ಷೆಯು ಮಾ.31ರಿಂದ ಆರಂಭಗೊಳ್ಳಲಿದ್ದು, ದ.ಕ.ಜಿಲ್ಲೆಯ 4 ಖಾಸಗಿ ಸಹಿತ 98 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಬರೆಯಲು ಜಿಲ್ಲೆಯ 523 ಶಾಲೆಗಳ 29,572 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ನೇರವಾಗಿ ಹತ್ತನೇ ತರಗತಿ ಓದಿದ 867 ವಿದ್ಯಾರ್ಥಿಗಳು ಸೇರಿದ್ದಾರೆ. ಈ ಮಕ್ಕಳಿಗೆ 4 ಖಾಸಗಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಮಾ.31ರಿಂದ ಆರಂಭಗೊಳ್ಳುವ ಪರೀಕ್ಷೆಯು ಎಪ್ರಿಲ್ 15ರವರೆಗೆ ನಡೆಯಲಿದೆ. ಆಯಾ ದಿನ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:45ರವರೆಗೆ ನಡೆಯಲಿದೆ. ಕೋರ್ ವಿಷಯ ಪರೀಕ್ಷೆಯು ಮಧ್ಯಾಹ್ನ 2ರಿಂದ ಸಂಜೆ 5:15ವರೆಗೆ ಮತ್ತು ಎನ್‌ಎಸ್‌ಕ್ಯೂಎಫ್ ಪರೀಕ್ಷೆಯು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:45ರವರೆಗೆ ನಡೆಯಲಿದೆ.
ದ.ಕ.ಜಿಲ್ಲೆಯು ಕಳೆದ ವರ್ಷ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿ ಕಾಯ್ದುಕೊಂಡಿದ್ದು, ಅದನ್ನು ಉಳಿಸಿಕೊಳ್ಳುವ ಸಲುವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಕಲ ಸಿದ್ಧತೆಗಳನ್ನು ಮಾಡಿವೆ. ಶಾಲಾ ಹಂತದಲ್ಲಿ ವಿವಿಧ ಸ್ವರೂಪಗಳಲ್ಲಿ ಪರೀಕ್ಷಾ ತಯಾರಿ ನಡೆಸಿವೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆ.144 ಜಾರಿಗೊಳಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.
ಉತ್ತರ ಪತ್ರಿಕೆಯನ್ನು ನಗರದ ಕಪಿತಾನಿಯೋದಲ್ಲಿರುವ ಸ್ಟ್ರಾಂಗ್ ರೂಮ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಡೆಸ್ಕ್, ಶೌಚಾಲಯ, ಕುಡಿಯಲು ನೀರು ಇತ್ಯಾದಿ ವ್ಯವಸ್ಥೆ ಕಲ್ಪಿಸಲಾಗಿದೆ. 98 ಕೇಂದ್ರಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಪರೀಕ್ಷೆ ಮುಗಿದ ತಕ್ಷಣ ಆಯಾ ವಲಯ ಶಿಕ್ಷಣಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲು ಸೂಚಿಸಲಾಗಿದೆ.
ಪರೀಕ್ಷೆ ಸುಸೂತ್ರವಾಗಿ ನಡೆಸಲು 1973 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 35 ರೂಟ್‌ಗಳನ್ನು ಗುರುತಿಸಲಾಗಿದ್ದು, ಸಿಟ್ಟಿಂಗ್ ಸ್ಕ್ವಾಡ್‌ಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಡಿಡಿಪಿಐ ಡಿ.ಆರ್.ನಾಯಕ್ ತಿಳಿಸಿದ್ದಾರೆ.