ಒಳಮೀಸಲಾತಿ ಘೋಷಣೆಯಿಂದ ಸಾಮಾಜಿಕ ನ್ಯಾಯದ ಬದ್ಧತೆ ಅನಾವರಣ: ಬಿಜೆಪಿ

ಉಡುಪಿ: ರಾಜ್ಯದಲ್ಲಿ ಮೀಸಲಾತಿಯ ಸಂಬಂಧ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಅನಾವರಣಗೊಳಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಅಸೆಂಬ್ಲಿಯಲ್ಲಿ ಕಾನೂನು ಮಾಡಿ ಅನುಷ್ಠಾನ ಮಾಡುತ್ತಿದೆ. ಅದೇ ಆಧಾರದಲ್ಲಿ ನೇಮಕಾತಿ ಮಾಡಲು ಸರಕಾರ ಮುಂದಾಗುತ್ತಿದೆ ಎಂದರು.
ಅದೇ ಆಧಾರದಲ್ಲಿ ಒಳ ಮೀಸಲಾತಿ ಬೇಕು ಎಂಬ ಬೇಡಿಕೆ ಇತ್ತು. ಎಸ್ಸಿಯಲ್ಲಿ 101 ಜಾತಿಗಳಿವೆ. ಇದರಿಂದ ಬಂಜಾರ, ಬೋವಿ, ಕೊರಚ, ಕೊರಮರನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುತ್ತಾರೆ ಎಂಬ ಆತಂಕ ಇತ್ತು. ಈಗಿರುವ ಎಸ್ಸಿ ಸಮುದಾಯದಲ್ಲಿ ಅವರವರ ಜನಸಂಖ್ಯೆಗೆ ಅನುಗುಣವಾಗಿ ಆರ್ಟಿಕಲ್ 341(2) ಪ್ರಕಾರ ನಾಲ್ಕು ವಿಭಾಗ ಮಾಡಲಾಗಿದೆ. ಎಸ್ಸಿ ಎಡ ಶೇ.6, ಎಸ್ಸಿ ಬಲ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಶೇ.4.5, ಇತರರಿಗೆ ಶೇ.1ರಷ್ಟು ಶಿಫಾರಸು ಮಾಡಿದ್ದನ್ನು ಸರಕಾರ ಒಪ್ಪಿಕೊಂಡಿದೆ ಎಂದರು.
ಪ್ರವರ್ಗ 1ರಲ್ಲಿ ಶೇ.4, ಪ್ರವರ್ಗ 2ಬಿ ಶೇ.4, ಪ್ರವರ್ಗ 3ಬಿ ಶೇ.5 ಇದೆ. ಹಿಂದುಳಿದ ವರ್ಗದ ಪಟ್ಟಿಯನ್ನು ಪ್ರತಿ 10ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕೆಂಬ ನಿಯಮ ಇದೆ. ಹಿಂದುಳಿದ ವರ್ಗಗಳ ಆಯೋಗವನ್ನು ಸ್ವಾಯತ್ತ ಮಾಡಲಾಗಿದೆ. ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಸರಕಾರ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಜನಪರ ನಿರ್ಧಾರ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ. ನಿರಂತರವಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನೇ ಮಾಡುತ್ತಾ ಬಂದಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ನೀಡಿರುವ ಸಾಮಾಜಿಕ ನ್ಯಾಯವನ್ನು ಕೇವಲ ಚುನಾವಣೆಯ ಕಾರಣಕ್ಕಾಗಿ ವಿರೋಧಿ ಸುತ್ತಿದೆ. ತಮ್ಮ ಆಡಳಿತಾವಧಿಯಲ್ಲಿ ಸಾಧಿಸಲಾಗದ ಐತಿಹಾಸಿಕ ನಿರ್ಣಯವನ್ನು ಬಿಜೆಪಿ ಸರಕಾರ ಕೈಗೊಂಡಿರುವುದನ್ನು ಸಹಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಿವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲ ಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಉಪಸ್ಥಿತರಿದ್ದರು.