ಉಡುಪಿ ಜಿಲ್ಲೆಯಲ್ಲಿ 1111 ಮತಗಟ್ಟೆಗಳು, 10.29 ಲಕ್ಷ ಮತದಾರರು: ಡಿಸಿ ಕೂರ್ಮಾರಾವ್
5 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ಕ್ಕೆ ಚುನಾವಣೆ
ಉಡುಪಿ, ಮಾ.29: ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸಿದಂತೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 1,111 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಹಾಗೂ ಸರ್ವಿಸ್ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10,29,678 ಮತದಾರರು ಅಂದು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಒಂದು ಹಂತದಲ್ಲಿ ನಡೆಯುವ ಚುನಾವಣೆಯ ವಿವರಗಳನ್ನು ನೀಡಿದರು. ಜಿಲ್ಲೆಯಲ್ಲಿ 118.ಬೈಂದೂರು, 119.ಕುಂದಾಪುರ, 120. ಉಡುಪಿ, 121.ಕಾಪು ಹಾಗೂ 122.ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ. ಎಲ್ಲವೂ ಸಾಮಾನ್ಯ ಮತಕ್ಷೇತ್ರಗಳಾಗಿವೆ ಎಂದವರು ತಿಳಿಸಿದರು.
ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಿಲ್ಲೆಯಾದ್ಯಂತ ಜಾರಿಗೊಂಡಿದ್ದು, ಹೀಗಾಗಿ ಚುನಾವಣಾ ನೀತಿ ಸಂಹಿತೆ ಮಾ.29ರಿಂದ ಮೇ 15ರವರೆಗೆ ಜಾರಿಯಲ್ಲಿರುತ್ತದೆ ಎಂದವರು ಸ್ಪಷ್ಟ ಪಡಿಸಿದರು.
ಎ.13ರ ಗುರುವಾರ ಚುನಾವಣೆಗೆ ಅದಿಸೂಚನೆ ಹೊರಡಿಸಲಾಗುವುದು, ಎ.20 ಗುರುವಾರ ಚುನಾವಣಾ ನಾಮಪತ್ರ ಸಲ್ಲಿಸಲು ಕೊನೆಯ ದಿನ, ಎ.21 ಶುಕ್ರವಾರ ನಾಮಪತ್ರಗಳ ಪರಿಶೀಲನೆ, ಎ.24 ಸೋಮವಾರ ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾದರೆ, ಮೇ 10 ಬುಧವಾರ ಮತದಾನ ನಡೆಯಲಿದೆ. ಮೇ 13ರ ಶನಿವಾರ ಮತಗಳ ಎಣಿಕೆ ನಡೆಯಲಿದೆ ಎಂದವರು ತಿಳಿಸಿದರು.
ನಾಮಪತ್ರ ಸ್ವೀಕರಿಸುವ ಸ್ಥಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸ್ವೀಕರಿಸುವ ಸ್ಥಳಗಳ ವಿವರ ಹೀಗಿದೆ.
118.ಬೈಂದೂರು: ಚುನಾವಣಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಸೌಧ, ಬೈಂದೂರು ತಾಲೂಕು ಬೈಂದೂರು.
119.ಕುಂದಾಪುರ: ಚುನಾವಣಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಕೋರ್ಟ್ ಹಾಲ್, ಕುಂದಾಪುರ.
120.ಉಡುಪಿ: ಚುನಾವಣಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಸೌಧ, ಉಡುಪಿ ತಾಲೂಕು ಉಡುಪಿ.
121.ಕಾಪು: ಚುನಾವಣಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಸೌಧ, ಕಾಪು ತಾಲೂಕು ಕಾಪು.
122.ಕಾರ್ಕಳ: ಚುನಾವಣಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಸೌಧ, ಕಾರ್ಕಳ.
ಚುನಾವಣಾಧಿಕಾರಿಗಳ ವಿವರ: 118.ಬೈಂದೂರು: ಜಗದೀಶ್ ಗಂಗಣ್ಣನವರ್ (ದೂರವಾಣಿ:9742094639), 119.ಕುಂದಾಪುರ: ರಶ್ಮಿ ಎನ್.ಆರ್. (8762823984), 120.ಉಡುಪಿ: ಸೀತಾ ಎಂ.ಸಿ. (8277932500), 121.ಕಾಪು: ಪಿ.ಕೆ.ಬಿನೋಯಿ (9900263702), 122.ಕಾರ್ಕಳ: ಮದನ್‌ಮೋಹನ್ ಸಿ.(9108910841).
ಜಿಲ್ಲೆಯ ಮತದಾರರ ವಿವರ: ಜಿಲ್ಲೆಯಲ್ಲಿ ಒಟ್ಟು 254 ಸರ್ವಿಸ್ ಮತದಾರರು ಸೇರಿದಂತೆ ಇರುವ ಮತದಾರರ ಒಟ್ಟು ಸಂಖ್ಯೆ 10,29,678. ಇವರಲ್ಲಿ ಪುರುಷ ಮತದಾರರ ಸಂಖ್ಯೆ 4,96,863 ಆದರೆ, ಮಹಿಳಾ ಮತದಾರರ ಸಂಖ್ಯೆ 5,32,795. ಅಲ್ಲದೇ 10 ಮಂದಿ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,13,758 ಪುರುಷ, 1,18,962 ಮಹಿಳೆ ಹಾಗೂ ಮೂವರು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,32,723 ಮತದಾರರಿದ್ದಾರೆ.
ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ 99,577 ಪುರುಷ, 1,07,625 ಮಹಿಳೆ ಹಾಗೂ ಇಬ್ಬರು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,07,204 ಮತದಾರರಿದ್ದಾರೆ.
ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 1,03,704 ಪುರುಷ, 1,10,945 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗಿ ಸೇರಿದಂತೆ ಒಟ್ಟು 2,14,650 ಮಂದಿ ಮತದಾರರಿದ್ದಾರೆ.
ಕಾಪು ವಿಧಾನಸಭಾ ವ್ಯಾಪ್ತಿಯಲ್ಲಿ 89,444 ಪುರುಷ, 97,233 ಮಹಿಳೆ ಹಾಗೂ 4 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1,86,681 ಮತದಾರರಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 90,380 ಪುರುಷ ಹಾಗೂ 98,030 ಮಹಿಳೆಯರು ಸೇರಿದಂತೆ ಒಟ್ಟು 1,88,410 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಯುವ ಮತದಾರರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ 17,927 ಮಂದಿ 18 ಮತ್ತು 19 ವರ್ಷದೊಳಗಿನ ವಯೋಮಾನದ ಯುವ ಮತದಾರರಿದ್ದಾರೆ. ಇವರಲ್ಲಿ ಬೈಂದೂರಿನಲ್ಲಿ 3,672, ಕುಂದಾಪುರದಲ್ಲಿ 3,277, ಉಡುಪಿಯಲ್ಲಿ 3,437, ಕಾಪುವಿನಲ್ಲಿ 3,560 ಹಾಗೂ ಕಾರ್ಕಳದಲ್ಲಿ 3,981 ಮಂದಿ ಮತದಾರರು ಮೊದಲ ಬಾರಿ ಮತದಾರರ ಪಟ್ಟಿಗೆ ನೊಂದಾಯಿತರಾಗಿದ್ದಾರೆ ಎಂದರು.
ದಿವ್ಯಾಂಗ ಮತದಾರರು: ಜಿಲ್ಲೆಯಲ್ಲಿ ಒಟ್ಟು 11,751 ವಿಕಲಚೇತನ ಮತದಾರರಿದ್ದಾರೆ. ಇವರಲ್ಲಿ 6531 ಮಂದಿ ಪುರುಷರಾದರೆ, 5220 ಮಂದಿ ಮಹಿಳೆಯರು. ಬೈಂದೂರಿನಲ್ಲಿ 3009, ಕುಂದಾಪುರದಲ್ಲಿ 2531, ಉಡುಪಿ ಯಲ್ಲಿ 1805, ಕಾಪುವಿನಲ್ಲಿ 2250, ಕಾರ್ಕಳದಲ್ಲಿ 2156 ಮಂದಿ ದಿವ್ಯಾಂಗ ಮತದಾರರಿದ್ದಾರೆ.
80 ವರ್ಷ ಮೇಲ್ಪಟ್ಟ ಮತದಾರರು: ಉಡುಪಿ ಜಿಲ್ಲೆಯಲ್ಲಿ ಒಟ್ಟು 31,268 ಮಂದಿ 80 ಮತ್ತು ಅದಕ್ಕಿಂತ ಹೆಚ್ಚು ಪ್ರಾಯದ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇವರಲ್ಲಿ 5865 ಮಂದಿ ಬೈಂದೂರಿನಲ್ಲಿ, 6209 ಮಂದಿ ಕುಂದಾಪುರ, 7827 ಮಂದಿ ಉಡುಪಿಯಲ್ಲಿ, 5,778 ಮಂದಿ ಕಾಪು ಹಾಗೂ 5589 ಮಂದಿ ಕಾರ್ಕಳ ಕ್ಷೇತ್ರಗಳಲ್ಲಿದ್ದಾರೆ.
ಮತಗಟ್ಟೆಯ ವಿವರ: 2023ರ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 1,111 ಮತಗಟ್ಟೆಗಳಿರುತ್ತವೆ ಎಂದು ಕೂರ್ಮಾರಾವ್ ಅವರು ತಿಳಿಸಿದರು. ಬೈಂದೂರು ಕ್ಷೇತ್ರದಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುನಲ್ಲಿ 208 ಹಾಗೂ ಕಾರ್ಕಳ ಕ್ಷೇತ್ರದಲ್ಲಿ 209 ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದರು.
ವಿಶೇಷ ಸವಲತ್ತು: ಇದೇ ಮೊದಲ ಬಾರಿಗೆ ದಿವ್ಯಾಂಗರು ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮತದಾನದ ವೇಳೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗುತ್ತದೆ. ಇವರು ಅಪೇಕ್ಷೆಪಟ್ಟರೆ ಮನೆಯಲ್ಲೇ ಕುಳಿತು ಅಂಚೆಮತದ ಮೂಲಕ ತಮ್ಮ ಮತ ಚಲಾಯಿಸಲು ಅವಕಾಶ ನೀಡ ಲಾಗುತ್ತದೆ. ಅಥವಾ ಅವರು ಇಚ್ಛಿಸಿದರೆ ಮನೆಯಿಂದ ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆ ಸಹ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದಕ್ಕಾಗಿ ತಂಡವೊಂದನ್ನು ರಚಿಸಲಾಗಿದ್ದು, ಜಿಲ್ಲೆಯ ಎಲ್ಲಾ ಹಿರಿಯ ಮತದಾರರಿಗೂ (80+) ಕೆಲವೇ ದಿನಗಳಲ್ಲಿ ಫಾರ್ಮ್ 12ಡಿ ಕಳುಹಿಸಲಾಗುತ್ತದೆ. ಅವರು ಅದರಲ್ಲಿ ತಮ್ಮ ಇಚ್ಚೆಯನ್ನು ಬರೆದು ನೀಡಿದರೆ ಅದರಂತೆ ಅಂಚೆಮತದಾನಕ್ಕೆ ಅಥವಾ ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮನೆಯಲ್ಲೇ ಕುಳಿತು ಮಾಡುವ ಅಂಚೆಮತದಾನ ಗೌಪ್ಯವಾಗಿದ್ದು, ಅಧಿಕಾರಿಗಳು ಹಾಗೂ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದರು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಸಭೆ, ಪ್ರಚಾರ ಸಭೆಗಳಿಗೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದರು. ಯಾವುದೇ ಅಕ್ರಮಗಳು, ಉಲ್ಲಂಘನೆಗಳು ನಡೆಯದಂತೆ ವಿಧಾನಸಭಾ ಕ್ಷೇತ್ರವಾರು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದರು.
ಕಂಟ್ರೋಲ್ ರೂಮ್: ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಇವುಗಳ ದೂರವಾಣಿ ಸಂಖ್ಯೆ 1950- ಟೋಲ್‌ಫ್ರೀ ನಂಬರ್ ಅಥವಾ 0820-2574991 ಆಗಿದೆ. ಈ ಕಂಟೋಲ್ ರೂಮ್ ದಿನದ 24 ಗಂಟೆ ಕಾರ್ಯಾಚರಿಸಲಿದ್ದು, ಚುನಾವಣೆಗೆ ಸಂಬಂಧಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದರೆ ತಕ್ಷಣ ಯಾರೂ ಕಂಟ್ರೋಲ್‌ರೂಮ್‌ಗೆ ಕರೆ ಮಾಡಿ ದೂರು ನೀಡಬಹುದು ಹಾಗೂ ಬೇಕಿದ್ದ ಅಗತ್ಯ ಮಾಹಿತಿ ಪಡೆಯ ಬಹುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.