ಉಡುಪಿ ಜಿಲ್ಲೆಯಲ್ಲಿ 17 ಚೆಕ್‌ಪೋಸ್ಟ್‌ಗಳ ರಚನೆ: ಈವರೆಗೆ ದಾಖಲೆಗಳಿಲ್ಲದ 42 ಲಕ್ಷ ರೂ. ವಶಕ್ಕೆ
ಉಡುಪಿ, ಮಾ.29: ಜಿಲ್ಲೆಯಲ್ಲಿ ಚುನಾವಣಾ ಖರ್ಚುವೆಚ್ಚಗಳ ಮೇಲೆ ನಿಗಾವಿರಿಸಲು, ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ವಾಹನಗಳ ವಿಶೇಷ ತಪಾಸಣೆಗಾಗಿ ಜಿಲ್ಲೆಯ 17 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ ತಿಳಿಸಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅವರು ಮಾತನಾಡಿ, ಜಿಲ್ಲೆಯೊಳಗೆ ಸಂಚರಿಸುವ ಹಾಗೂ ಹೊರಜಿಲ್ಲೆಗಳ ಸಂಚಾರಗಳ ಮೇಲೆ ನಿಗಾ ಇರಿಸಲು ಈ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಆಗಾಗ ಪೊಲೀಸ್ ತಂಡಗಳು ಹಠಾತ್ ತಪಾಸಣೆಯನ್ನೂ ನಡೆಸಲಿದೆ ಎಂದರು.
ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿಯಲ್ಲಿ, ಕುಂದಾಪುರ ಕ್ಷೇತ್ರದ ಹಾಲಾಡಿ, ಕಂಡ್ಲೂರು, ತೆಕ್ಕಟ್ಟೆಯಲ್ಲಿ, ಉಡುಪಿ ಕ್ಷೇತ್ರದ ನೇಜಾರು, ಬಲಾಯಿಪಾದೆ ಉದ್ಯಾವರ, ಅಲೆವೂರಿನಲ್ಲಿ, ಕಾಪು ಕ್ಷೇತ್ರದ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರುಗಳಲ್ಲಿ ಹಾಗೂ ಕಾರ್ಕಳ ಕ್ಷೇತ್ರದ ನಾಡ್ಪಾಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು ಹಾಗೂ ಬೆಳ್ಮಣ್‌ಗಳಲ್ಲಿ ಚೆಕ್‌ಪೋಸ್ಟ್‌ಗಳಿರುತ್ತವೆ.
42 ಲಕ್ಷ ರೂ.ವಶ: ಕಳೆದ 15 ದಿನಗಳಿಂದ ಚೆಕ್‌ಪೋಸ್ಟ್‌ಗಳಲ್ಲಿ ಪ್ರಾರಂಭಿಸಿದ ವಾಹನಗಳ ಹಠಾತ್ ಪರಿಶೀಲನೆ ವೇಳೆ ಜಿಲ್ಲೆಯ ವಿವಿದೆಡೆಗಳಲ್ಲಿ ದಾಖಲೆಗಳಿಲ್ಲದೇ ಸಾಗಾಟ ಮಾಡುತಿದ್ದ ಒಟ್ಟು 42 ಲಕ್ಷರೂ.ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ದಾಳಿಯ ವೇಳೆ 10 ಲಕ್ಷರೂ.ಗಳಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಯಾವುದೇ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿರುವುದು ಪತ್ತೆಯಾದರೆ ಅವುಗಳನ್ನು ಆದಾಯ ತೆರಿಗೆ ವಿಭಾಗಕ್ಕೆ ಒಪ್ಪಿಸಲಾಗುತ್ತದೆ. ಅವರು ಹಣದ ಮೂಲದ ಬಗ್ಗೆ ತನಿಖೆ ನಡೆಸುವರು ಎಂದರು.
ಸೂಕ್ತ ದಾಖಲೆಗಳನ್ನು ನೀಡಿ ನ್ಯಾಯಾಲಯದ ಮೂಲಕ ಹಣವನ್ನು ವಾಪಾಸು ಪಡೆದುಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
5500ಲೀ. ಮದ್ಯ ವಶ: ಅದೇ ರೀತಿ ಜಿಲ್ಲೆಯಲ್ಲಿ ಈವರೆಗೆ 5500 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.