ಉಡುಪಿ: ಕೋಟೆ, ಮುದ್ರಾಡಿ ಪರಿಸರದಲ್ಲಿ ನೀರಿಗೆ ಸಮಸ್ಯೆ
ಉಡುಪಿ, ಮಾ.29: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಸಭೆ ಕರೆದು ಚರ್ಚಿಸಲಾಗಿದೆ. ಅದೇ ರೀತಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದ ಸಮಿತಿಗೆ ಇದರ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.
ಗ್ರಾಪಂ ಹಾಗೂ ನಗರ ಪ್ರದೇಶಗಳಲ್ಲಿ ಜಲಮೂಲಗಳನ್ನು ಹುಡುಕಿ ಅವುಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನೀರಿನ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿರುವ ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳನ್ನು ಪುನರುಜ್ಜೀವನಗೊಳಿಸಿ ಅದನ್ನು ಕುಡಿಯುವ ನೀರಿಗೆ ಬಳಸುವಂತೆ ಸೂಚಿಸಲಾಗಿದೆ ಎಂದರು.
ಅಲ್ಲದೇ ನದಿ ತೀರದ ಪಂಪ್‌ಸೆಟ್‌ಗಳಿಂದ ನೀರನ್ನು ಪಡೆಯುವುದನ್ನು ಸದ್ಯಕ್ಕೆ ನಿಲ್ಲಿಸುವಂತೆ ರೈತರಿಗೆ ಸೂಚಿಸಲಾಗಿದೆ. ಇಲಾಖೆಯ ಮೂಲಕ ಇದಕ್ಕೆ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಸದ್ಯ ಕಟಪಾಡಿ ಸಮೀಪದ ಕೋಟೆ ಗ್ರಾಪಂನಲ್ಲಿ 100 ಮನೆಗಳಿಗೆ, ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ 10 ಮನೆಗಳಿಗೆ, ಕಾರ್ಕಳ ಕಲ್ಯಾ ಗ್ರಾಮದ 25 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ವರದಿಯಾಗಿದ್ದು, ಸೂಕ್ತ ಕ್ರಮಕ್ಕಾಗಿ ಸೂಚನೆಗಳನ್ನು ನೀಡಿರುವುದಾಗಿ ಜಿಪಂ ಸಿಇಓ ಪ್ರಸನ್ನ ಎಚ್. ತಿಳಿಸಿದರು.
15ನೇ ಹಣಕಾಸು ನಿಧಿಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಶೇ.30ರಷ್ಟು ಅನುದಾನವನ್ನು ಬಳಸಲು ಅವಕಾಶವಿದೆ. ಅದರ ಮೂಲಕ ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳನ್ನು ಪುನರುಜ್ಜೀವನಗೊಳಿಸಿ ನೀರು ನೀಡಲು ಪ್ರಯತ್ನಿಸಲಾಗುವುದು. ಕೊನೆಯ ಹಂತದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ತಿಳಿಸಿದ ಪ್ರಸನ್ನ, ಎಲ್ಲಾ ಗ್ರಾಪಂಗಳಿಗೂ ಈ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.