ಜೈಪುರ ಸರಣಿ ಸ್ಪೋಟ: ಮರಣದಂಡನೆಗೆ ಗುರಿಯಾಗಿದ್ದ ಎಲ್ಲಾ ಆರೋಪಿಗಳು ಖುಲಾಸೆ
ಜೈಪುರ್: 2008ರ ಸರಣಿ ಜೈಪುರ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
ಸೈಫ್, ಸೈಫುಲ್ ರೆಹಮಾನ್, ಸರ್ವರ್, ಹಾಗೂ ಸಲ್ಮಾನ್ ಸಾಹಬ್ ರಿಗೆ ಕೆಳ ನ್ಯಾಯಾಲಯವು ಮರಣ ದಂಡನೆ ವಿಧಿಸಿತ್ತು. ಇವರ ಶಿಕ್ಷೆಯನ್ನು ರದ್ದು ಪಡಿಸಿ, ಆರೋಪಗಳಿಂದ ಖುಲಾಸೆಗೊಳಿಸಿರುವ ಹೈಕೋರ್ಟ್ ಪೊಲೀಸರ ವಿರುದ್ಧವೇ ತನಿಖೆಗೆ ಆದೇಶ ನೀಡಿದೆ.
ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ವಿಧಿಸಿದ್ದ ಮರಣದಂಡನೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಭಂಡಾರಿ ಮತ್ತು ಸಮೀರ್ ಜೈನ್ ಅವರ ವಿಭಾಗೀಯ ಪೀಠ ಬುಧವಾರ ತೀರ್ಪು ಪ್ರಕಟಿಸಿದೆ.
2008 ರ ಮೇ 13 ರಂದು ಜೈಪುರದ ಮಾನಕ್ ಚೌಕ್ ಖಂಡ, ಚಂದ್ ಪೋಲ್ ಗೇಟ್, ಬಡಿ ಚೌಪದ್, ಛೋಟಿ ಚೌಪದ್, ಟ್ರಿಪೋಲಿಯಾ ಗೇಟ್, ಜೋಹ್ರಿ ಬಜಾರ್ ಮತ್ತು ಸಂಗನೇರಿ ಗೇಟ್‌ಗಳಲ್ಲಿ ಒಂದರ ಹಿಂದೆ ಒಂದರಂತೆ ಸರಣಿಯಾಗಿ ಬಾಂಬ್ ಸ್ಫೋಟಗೊಂಡಿತ್ತು. ಸಂಜೆ ಸಂಭವಿಸಿದ ಸ್ಫೋಟಗಳಲ್ಲಿ 71 ಜನರು ಸಾವನ್ನಪ್ಪಿ, 185 ಜನರು ಗಾಯಗೊಂಡಿದ್ದರು.
ರಾಮಚಂದ್ರ ದೇವಸ್ಥಾನದ ಬಳಿ ಒಂದು ಜೀವಂತ ಬಾಂಬ್ ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು.