ಗ್ರಾಮೀಣ ನೀರು ಪೂರೈಕೆ ಯೋಜನೆ: ಕರ್ನಾಟಕಕ್ಕೆ 363 ಮಿ.ಡಾ.ಸಾಲಕ್ಕೆ ವಿಶ್ವಬ್ಯಾಂಕ್ ಅನುಮೋದನೆ
ಹೊಸದಿಲ್ಲಿ,ಮಾ.29: ರಾಜ್ಯದಲ್ಲಿಯ 20 ಲಕ್ಷ ಕುಟುಂಬಗಳಿಗೆ ಅವರ ಮನೆಗಳಲ್ಲಿಯ ಪೈಪ್‌ಲೈನ್ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕರ್ನಾಟಕಕ್ಕೆ 363 ಮಿ.ಡಾ.(ಸುಮಾರು 2985 ಕೋ.ರೂ.)ಗಳ ಸಾಲಕ್ಕೆ ವಿಶ್ವಬ್ಯಾಂಕ್ ಅನುಮೋದನೆಯನ್ನು ನೀಡಿದೆ.
ವಿಶ್ವಬ್ಯಾಂಕ್ ಹೇಳಿಕೆಯಂತೆ ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಪೂರೈಕೆ ಕಾರ್ಯಕ್ರಮವು ರಾಜ್ಯದಲ್ಲಿಯ ಪ್ರತಿಯೊಂದೂ ಗ್ರಾಮೀಣ ಕುಟುಂಬಕ್ಕೆ ನಳ್ಳಿ ನೀರನ್ನು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲಿದೆ.
ಇದು ಕುಡಿಯುವ ನೀರಿನ ವಿತರಣೆ ಜಾಲದ ನಿರ್ಮಾಣ ಮತ್ತು ಗ್ರಾಮೀಣ ಕುಟುಂಬಗಳ ಮನೆಗಳಲ್ಲಿ ನೀರಿನ ಮೀಟರ್‌ಗಳ ಸ್ಥಾಪನೆಯನ್ನು ಒಳಗೊಂಡಿದೆ ಮತ್ತು ರಾಜ್ಯದ 31 ಜಿಲ್ಲೆಗಳ ಸುಮಾರು ಒಂದು ಕೋ.ಜನರಿಗೆ ಪ್ರಯೋಜನವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಕರ್ನಾಟಕಕ್ಕೆ ಸಾಲವನ್ನು ಪ್ರಕಟಿಸಿರುವ ವಿಶ್ವಬ್ಯಾಂಕ್,ರಾಜ್ಯದ ಸುಮಾರು ಶೇ.77ರಷ್ಟು ಪ್ರದೇಶವು ಶುಷ್ಕ ಅಥವಾ ಅರೆ ಶುಷ್ಕವಾಗಿದ್ದು,ಹವಾಮಾನ ಬದಲಾವಣೆ ಸಂಬಂಧಿತ ಮಳೆ ವ್ಯತ್ಯಯಗಳಿಂದಾಗಿ ಬರ ಮತ್ತು ಪ್ರವಾಹಗಳಿಗೆ ತುತ್ತಾಗುತ್ತದೆ. ಇದು ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ ಮತ್ತು ನೀರಿನ ಗುಣಮಟ್ಟವು ಹದಗೆಡುತ್ತಿದೆ ಎಂದು ತಿಳಿಸಿದೆ.
ಈ ಕಾರ್ಯಕ್ರಮದ ಮೂಲಕ ವಿಶ್ವಬ್ಯಾಂಕ್ ಮತ್ತು ಕರ್ನಾಟಕ ಕನಿಷ್ಠ 500 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ 24/7 ನೀರು ಪೂರೈಕೆಯನ್ನು ಬಯಸಿವೆ ಎಂದು ಕಾರ್ಯಕ್ರಮದ ಟಾಸ್ಕ್ ಟೀಮ್ ನಾಯಕರಾದ ಕ್ರಿಸ್ಟೋಫರ್ ವೆಲ್ಸಿಯೆನ್ ಮತ್ತು ಮರಿಯಪ್ಪ ಕುಳ್ಳಪ್ಪ ತಿಳಿಸಿದರು. ಸಾಲವನ್ನು ಎರಡು ವರ್ಷಗಳ ಗ್ರೇಸ್ ಅವಧಿ ಸೇರಿದಂತೆ 13.5 ವರ್ಷಗಳಲ್ಲಿ ತೀರಿಸಬೇಕಿದೆ.