ಶರಣಾಗತಿಯಾಗಲು ಅಮೃತಪಾಲ್ ಸಿಂಗ್ ರಾಜ್ಯಕ್ಕೆ ಮರಳಿರುವ ಸಾಧ್ಯತೆ: ಪಂಜಾಬ್ ಪೊಲೀಸ್ ಮೂಲಗಳು

ಚಂಡಿಗಡ,ಮಾ.29: ಹತ್ತು ದಿನಗಳಿಂದ ಬಂಧನವನ್ನು ತಪ್ಪಿಸಿಕೊಳ್ಳುತ್ತಿರುವ ಮೂಲಭೂತವಾದಿ ಸಿಖ್ ಬೋಧಕ ಅಮೃತಪಾಲ್ ಸಿಂಗ್ ಪಂಜಾಬಿಗೆ ಮರಳಿದ್ದಾನೆ ಮತ್ತು ಶರಣಾಗಲು ಯೋಜಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಅಮೃತಪಾಲ್ ಉಪಸ್ಥಿತಿಯ ಬಗ್ಗೆ ಪಂಜಾಬ್ ಪೊಲೀಸರಿಗೆ ಮಾಹಿತಿ ದೊರೆತಾಗ ಆತ ಹೋಷಿಯಾರಪುರದ ಗ್ರಾಮಗಳ ಮೂಲಕ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ ಎಂದು ಈ ಮೂಲಗಳು ತಿಳಿಸಿದೆ.
ಮಂಗಳವಾರ ರಾತ್ರಿ ಅಮೃತಪಾಲ್ ಮತ್ತು ಆತನ ಸಹಚರರ ಬಂಧನಕ್ಕಾಗಿ ಪೊಲೀಸರು ಹೋಷಿಯಾರಪುರದಲ್ಲಿ ಮತ್ತು ನೆರೆಯ ಗ್ರಾಮಗಳಲ್ಲಿ ವ್ಯಾಪಕ ಮನೆ ಮನೆ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಆದರೆ ಅಮೃತಪಾಲ್ ಇನೋವಾ ಕಾರನ್ನು ಹೋಷಿಯಾರಪುರದ ಮರೈಯಾನ್ ಗ್ರಾಮದ ಗುರುದ್ವಾರಾದಲ್ಲಿ ಬಿಟ್ಟು ಹೊಲಗಳ ಮೂಲಕ ಪರಾರಿಯಾಗಿರುವಂತಿದೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶರಣಾಗುವ ಮುನ್ನ ಅಂತರರಾಷ್ಟ್ರೀಯ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಲು ಅಮೃತಪಾಲ್ ಉದ್ದೇಶಿಸಿದ್ದ, ಆದರೆ ತನಗೆ ಪರಾರಿಯಾಗುವ ಅವಕಾಶವಿಲ್ಲ ಎನ್ನುವುದು ಗೊತ್ತಾದಾಗ ತನ್ನ ಮನಸ್ಸು ಬದಲಿಸಿದ್ದ ಎಂದು ಮೂಲಗಳು ಹೇಳಿವೆ.
ತಲೆಗೆ ಟರ್ಬನ್ ಇಲ್ಲದೆ ಮಾಸ್ಕ್ ಮತ್ತು ಕಪ್ಪು ಕನ್ನಡಕ ಧರಿಸಿದ್ದ ಅಮೃತಪಾಲ್ ತನ್ನ ಸಹಚರ ಪಪಲ್ಪ್ರೀತ್ ಸಿಂಗ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹೊಸ ವೀಡಿಯೊ ಮಂಗಳವಾರ ಸಾಮಾಜಿಕ ಜಾಲದಲ್ಲಿ ಪ್ರತ್ಯಕ್ಷವಾಗಿತ್ತು. ದಿನಾಂಕವಿಲ್ಲದ ಈ ಸಿಸಿಟಿವಿ ದೃಶ್ಯಾವಳಿ ದಿಲ್ಲಿಯ ಮಾರುಕಟ್ಟೆಯೊಂದರದು ಎನ್ನಲಾಗಿದೆ.







