ನಿವೃತ್ತ ನ್ಯಾಯಾಧೀಶರ ವಿರುದ್ಧ ಬೆದರಿಕೆಯನ್ನು ಹಿಂಪಡೆಯುವಂತೆ ಕಾನೂನು ಸಚಿವರಿಗೆ ಆಗ್ರಹ
ಕಿರಣ್ ರಿಜಿಜು ವಿರುದ್ಧ 320ಕ್ಕೂ ಅಧಿಕ ವಕೀಲರಿಂದ ಪತ್ರ
ಹೊಸದಿಲ್ಲಿ,ಮಾ.29: ಮಾಧ್ಯಮ ಸಂಸ್ಥೆಯೊಂದರ ಸಮಾವೇಶದಲ್ಲಿ ನಿವೃತ್ತ ನ್ಯಾಯಾಧೀಶರನ್ನು ಭಾರತ ವಿರೋಧಿ ಗ್ಯಾಂಗಿನ ಭಾಗ ಎಂದು ಬಣ್ಣಿಸುವ ಮೂಲಕ ಕಾನೂನು ಸಚಿವ ಕಿರಣ ರಿಜಿಜು ಅವರ ‘ಬೆದರಿಕೆ ’ ಗೆ ಬುಧವಾರ ಬಹಿರಂಗವಾಗಿ ಪ್ರತಿಕ್ರಿಯಿಸಿರುವ ದೇಶಾದ್ಯಂತದ 320ಕ್ಕೂ ಅಧಿಕ ವಕೀಲರು, ತನ್ನ ಹುದ್ದೆಗೆ ಅರ್ಹವಲ್ಲದ ಅವಮಾನಕಾರಿ ಟೀಕೆಗಳನ್ನು ಮತ್ತು ಬೆದರಿಕೆಗಳನ್ನು ಸಾರ್ವಜನಿಕವಾಗಿ ಹಿಂದೆಗೆದುಕೊಳ್ಳುವಂತೆ ಅವರನ್ನು ಆಗ್ರಹಿಸಿದ್ದಾರೆ.
ಇಕ್ಬಾಲ ಛಾಗ್ಲಾ, ಜನಕ ದ್ವಾರಕಾದಾಸ, ಕಪಿಲ್ ಸಿಬಲ್, ಎ.ಎಂ.ಸಿಂಘ್ವಿ, ದುಷ್ಯಂತ ದವೆ, ಅರವಿಂದ ದಾತಾರ್, ರಾಜು ರಾಮಚಂದ್ರನ್, ಸಿ.ಯು.ಸಿಂಗ್, ಶ್ರೀರಾಮ ಪಂಛು, ಗೋಪಾಲ ಶಂಕರನಾರಾಯಣನ್, ನಿತ್ಯಾ ರಾಮಕೃಷ್ಣನ್, ಪ್ರಶಾಂತ ಭೂಷಣರಂತಹ ಹಿರಿಯ ನ್ಯಾಯವಾದಿಗಳು ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳ ವಕೀಲರು ಈ ಪ್ರತಿಕ್ರಿಯೆಗೆ ಸಹಿ ಹಾಕಿದ್ದಾರೆ.
ಭಿನ್ನಾಭಿಪ್ರಾಯದ ಧ್ವನಿಯನ್ನು ಉಳಿಸುವುದಿಲ್ಲ ಎಂದು ಸಚಿವರು ಬೆದರಿಸಿದ್ದಾರೆ ಎಂದು ಹೇಳಿರುವ ಈ ವಕೀಲರು, ‘ಸರಕಾರವನ್ನು ಟೀಕಿಸುವುದು ದೇಶ ವಿರೋಧಿಯಲ್ಲ ಎನ್ನುವುದನ್ನು ನಾವು ಸಚಿವರಿಗೆ ನೆನಪಿಸಬೇಕು. ಈಗಿನ ಸರಕಾರವೇ ದೇಶವಲ್ಲ ಮತ್ತು ದೇಶವು ಸರಕಾರವಲ್ಲ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಬೇಕು’ ಎಂದಿದ್ದಾರೆ.
‘ದೇಶವಿರೋಧಿಗಳು ಎಂದು ಸಚಿವರು ಆಪಾದಿಸಿರುವ ಈ ನಿವೃತ್ತ ನ್ಯಾಯಾಧೀಶರು ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯಲು ತಮ್ಮ ಬದುಕನ್ನೇ ಸಮರ್ಪಿಸಿದ್ದ ವ್ಯಕ್ತಿಗಳಾಗಿದ್ದಾರೆ ಮತ್ತು ಅವರ ವಿರುದ್ಧ ಪ್ರತೀಕಾರದ ಬೆದರಿಕೆಯು ನಮ್ಮ ಮಹಾನ್ ರಾಷ್ಟ್ರದಲ್ಲಿ ಸಾರ್ವಜನಿಕ ಭಾಷಣಗಳು ತಲುಪಿರುವ ಕೀಳುಮಟ್ಟವನ್ನು ಸೂಚಿಸುತ್ತಿದೆ’ ಎಂದು ಹೇಳಿದ್ದಾರೆ.
ಸಂಸತ್ ಸದಸ್ಯರಾಗಿ ಸಂವಿಧಾನದಲ್ಲಿ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ರಿಜಿಜು ಅವರಿಗೆ ನೆನಪಿಸಿರುವ ವಕೀಲರು, ಕಾನೂನು ಮತ್ತು ನ್ಯಾಯ ಸಚಿವರಾಗಿ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಂಗ ಹಾಗೂ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ ಎಂದಿದ್ದಾರೆ.
ಕೆಲವು ನಿವೃತ್ತ ನ್ಯಾಯಾಧೀಶರ ಅಭಿಪ್ರಾಯಗಳನ್ನು ರಿಜಿಜು ಒಪ್ಪಿಕೊಳ್ಳದಿರಬಹುದು, ಆದರೆ ಅವರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳಿಂದ ಕ್ರಮದ ಸಾರ್ವಜನಿಕ ಬೆದರಿಕೆಗಳನ್ನು ಒಡ್ಡುವುದು ಅವರ ಕರ್ತವ್ಯದ ಭಾಗವಾಗಿಲ್ಲ ಎಂದು ವಕೀಲರು ಹೇಳಿದ್ದಾರೆ.