ಪಾಕಿಸ್ತಾನ: ಸಿಜೆ ಅಧಿಕಾರ ನಿರ್ಬಂಧ
ಇಸ್ಲಮಾಬಾದ್, ಮಾ.29: ಮುಖ್ಯ ನ್ಯಾಯಮೂರ್ತಿಯ ವಿವೇಚನಾ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದ ಮಸೂದೆಗೆ ಪಾಕಿಸ್ತಾನದ ರಾಷ್ಟ್ರೀಯ ಮಸೂದೆ ಬುಧವಾರ ಅನುಮೋದನೆ ನೀಡಿದೆ.
ದೇಶದ ಅತ್ಯುನ್ನತ ನ್ಯಾಯಾಧೀಶರ ಅಧಿಕಾರವನ್ನು ಮೊಟಕುಗೊಳಿಸುವ ಕಾನೂನನ್ನು ಸಂಸತ್ತು ಜಾರಿಗೊಳಿಸದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸದು ಎಂದು ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಹೇಳಿಕೆ ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
`ದಿ ಸುಪ್ರೀಂಕೋರ್ಟ್ (ಪ್ರಾಕ್ಟೀಸ್ ಆ್ಯಂಡ್ ಪ್ರೊಸೀಜರ್) ಆ್ಯಕ್ಟ್ 2023' ಕ್ಕೆ ಮಂಗಳವಾರ ಸಂಜೆ ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಸಂಸತ್ತಿನ ಸ್ಥಾಯಿ ಸಮಿತಿಯೂ ಅನುಮೋದಿಸಿದೆ. ನಂತರ ಕಾನೂನು ಸಚಿವ ಅಝಾಮ್ ನಝೀರ್ ರಾತ್ರಿ ಸಂಸತ್ತಿನಲ್ಲಿ ಮಂಡಿಸಿದ್ದರು. ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ. ಮುಖ್ಯ ನ್ಯಾಯಾಧೀಶರ ಸ್ವಯಂಪ್ರೇರಿತ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನ ಇಬ್ಬರು ನ್ಯಾಯಾಧೀಶರು ಅರ್ಜಿ ಸಲ್ಲಿಸಿದ್ದರು.
ಸ್ವಯಂಪ್ರೇರಿತ ಪ್ರಕರಣದ ತೀರ್ಪು ನೀಡಿದ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲು ಶಾಸನವು ಅವಕಾಶ ನೀಡುತ್ತದೆ ಮತ್ತು 14 ದಿನಗಳಲ್ಲಿ ಅಂತಹ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಪೀಠವನ್ನು ರಚಿಸಬೇಕು ಎಂದು ಸೂಚಿಸಿದೆ.
ಸರಕಾರದ ಈ ಕ್ರಮ ನ್ಯಾಯಾಂಗದ ಮೇಲೆ ಮತ್ತಷ್ಟು ಒತ್ತಡ ಹೇರುವ ಉದ್ದೇಶ ಹೊಂದಿದೆ ಎಂದು ಮಾಜಿ ಪ್ರಧಾನಿ, ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್‍ಖಾನ್ ಟೀಕಿಸಿದ್ದಾರೆ.