ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಕಲ್ಪಿಸಬಹುದಿತ್ತು: ಶಾಸಕ ಝಮೀರ್ ಅಹ್ಮದ್ ಖಾನ್

ಬೆಂಗಳೂರು, ಮಾ.29: ರಾಜ್ಯ ಬಿಜೆಪಿ ಸರಕಾರವು ತನ್ನ ಮುಸ್ಲಿಮ್ ವಿರೋಧಿ ನೀತಿಯನ್ನು ಸಾಬೀತುಪಡಿಸಲು ಮುಸ್ಲಿಮರಿಗೆ 29 ವರ್ಷಗಳಿಂದ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ಹಿಂಪಡೆದಿದೆ ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನಮ್ಮ ಹಕ್ಕನ್ನು ಕಸಿದು, ಅವರಿಗೆ ನೀಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರಕ್ಕೆ ನಿಜಕ್ಕೂ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಪ್ರಾಮಾಣಿಕ ಇಚ್ಛೆ ಇಲ್ಲ. ತಮಿಳುನಾಡಿನಲ್ಲಿ ಶೇ.76ರಷ್ಟು ಮೀಸಲಾತಿ ಪ್ರಮಾಣ ಇದೆ. ಅದೇ, ನಮ್ಮ ರಾಜ್ಯದಲ್ಲಿ ಶೇ.56ರಷ್ಟು ಇದೆ. ತಮಿಳುನಾಡು ಮಾದರಿಯಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡಿ, ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಹಂಚಿಕೆ ಮಾಡಬಹುದಿತ್ತು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ನ್ಯಾ.ನಾಗಮೋಹನ್ ದಾಸ್ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ಮೂರು ವರ್ಷ ಆಯಿತು. ಸದನದಲ್ಲಿ ಆ ವರದಿಯನ್ನು ಮಂಡಿಸಿ ಚರ್ಚೆಗೆ ಅವಕಾಶ ಕೊಡಿ ಎಂದರೆ ಸರಕಾರ ಸ್ಪಂದಿಸಲಿಲ್ಲ. ಒಂದು ವೇಳೆ ನಾಗಮೋಹನ್ ದಾಸ್ ವರದಿ ಚರ್ಚೆಗೆ ಅವಕಾಶ ನೀಡಿದ್ದರೆ, ಇವತ್ತು ಇಂತಹ ಗೊಂದಲದ ವಾತಾವರಣ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಯಾವುದೆ ಒಂದು ಸಮುದಾಯಕ್ಕೆ ಮೀಸಲಾತಿ ನೀಡಲು ಅಥವಾ ತೆಗೆಯಲು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿ ಶಿಫಾರಸ್ಸುಗಳನ್ನು ಸಲ್ಲಿಸಬೇಕಿರುತ್ತದೆ. ಆದರೆ, ಈ ಸರಕಾರ ಯಾವುದೆ ವರದಿಯನ್ನು ತರಿಸಿಕೊಳ್ಳದೆ ಏಕಾಏಕಿ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.