ಔರಂಗಾಬಾದ್: ರಾಮಮಂದಿರ ಸಮೀಪ ಪೊಲೀಸರ ಮೇಲೆ ದಾಳಿ ನಡೆಸಿದ 500 ಮಂದಿಯ ಗುಂಪು

ಔರಂಗಾಬಾದ್: ಪ್ರಸಿದ್ಧ ರಾಮಮಂದಿರವಿರುವ ಪ್ರದೇಶದಲ್ಲಿ ಕೆಲವು ಯುವಕರ ನಡುವೆ ಘರ್ಷಣೆ ನಡೆದು, ಸ್ಥಳದಲ್ಲಿದ್ದ ಪೊಲೀಸರ ಮೇಲೆ 500 ಮಂದಿಯ ಗುಂಪು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ ಎಂದು ಗುರುವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ವರದಿ ಮಾಡಿದೆ.
ಪ್ರಸಿದ್ಧ ರಾಮಮಂದಿರವಿರುವ ಕಿರಾಡ್‍ಪುರ ಪ್ರದೇಶದಲ್ಲಿ ರಾಮನವಮಿಯಂದು ಸಾಮಾನ್ಯವಾಗಿ ದೊಡ್ಡ ಜನಸಂದಣಿ ಸೇರಲಿದ್ದು, ಈ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
“ದಾಳಿಯಲ್ಲಿ ಭಾಗಿಯಾಗಿದ್ದ 500-600 ಮಂದಿ ಗುಂಪಿನಲ್ಲಿದ್ದ ಜನರು ಯಾರೆಂದು ನಮಗೆ ತಿಳಿದಿಲ್ಲ. ಕೆಲವು ಯುವಕರ ಘರ್ಷಣೆ ನಡೆದ ನಂತರ ಈ ದಾಳಿ ನಡೆದಿದೆ. ದಾಳಿಕೋರರನ್ನು ಪತ್ತೆ ಹಚ್ಚಲು ಶೋಧಕಾರ್ಯ ಪ್ರಗತಿಯಲ್ಲಿದೆ” ಎಂದು ಔರಂಗಾಬಾದ್ ಪೊಲೀಸ್ ಆಯುಕ್ತ ನಿಖಿಲ್ ಗುಪ್ತಾ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಗುಂಪು ಘರ್ಷಣೆ ಒಂದು ಗಂಟೆಯ ಕಾಲ ನಡೆಯಿತು. ಆದರೆ, ದೇವಾಲಯ ಸುರಕ್ಷಿತವಾಗಿದೆ. ಈ ಘಟನೆಯಲ್ಲಿ ಆರರಿಂದ ಏಳು ವಾಹನಗಳಿಗೆ ಹಾನಿಯಾಗಿದೆ. ಈವರೆಗೆ ಯಾವುದೇ ಬಂಧನವಾಗಿಲ್ಲ” ಎಂದೂ ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ವಿಡಿಯೊದಲ್ಲಿ ಸ್ಥಳೀಯ ಸಂಸದ ಇಮ್ತಿಯಾಝ್ ಜಲೀಲ್, ಸಚಿವ ಅತುಲ್ ಸವೆ ಹಾಗೂ ಇನ್ನಿತರರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
“ರಾಮಮಂದಿರ ಸುರಕ್ಷಿತವಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಹಿಡಿಯಬೇಕು” ಎಂದು ಸಂಸದ ಜಲೀಲ್ ಆಗ್ರಹಿಸಿದ್ದಾರೆ.