ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಬೆಂಗಳೂರಿನಲ್ಲಿ ಅಮಾನುಷ ಘಟನೆ
ಬೆಂಗಳೂರು, ಮಾ.29: ಮನೆಯಿಂದ ಕಾಲೇಜಿಗೆ ಹೊರಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಆಕೆಯ ಪರಿಚಯಸ್ಥ ಯುವಕನೇ ಎಳೆದೊಯ್ದು ಅತ್ಯಾಚಾರವೆಸಗಿ, ಕೊಲೆಗೈದಿರುವ ಘಟನೆ ಇಲ್ಲಿನ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಗರ ರಸ್ತೆಯ ನಿವಾಸಿ, ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೊಲೆಯಾಗಿದ್ದು, ಕೃತ್ಯವೆಸಗಿದ ಆರೋಪದಡಿ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ಯುವತಿಯೂ, ದ್ವಿತೀಯ ಪಿಯುಸಿ ಮೊದಲನೆ ತರಗತಿಗೆ ಹಾಜರಾಗುವ ಸಲುವಾಗಿ ಮಾ.24ರಂದು ಬೆಳಗ್ಗೆ 8:30ಕ್ಕೆ ಮನೆಯಿಂದ ಹೊರಹೋಗಿದ್ದಾರೆ. ಈ ವೇಳೆ ಆಕೆಗೆ ಪರಿಚಯಸ್ಥನೇ ಆಗಿರುವ ಬಸಪ್ಪನಪಾಳ್ಯದ ವೆಂಕಟೇಶ್ ಆಕೆಯನ್ನು ಕಾಲೇಜು ಮುಗಿದ ಬಳಿಕ ಬಲವಂತವಾಗಿ ಭೈರಸಂದ್ರ ಲೇಔಟ್‍ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಆನಂತರ, ಆಕೆಯನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ಇನ್ನೂ, ಈ ಸಂಬಂಧ ಸಂತ್ರಸ್ತ ಯುವತಿಯ ತಂದೆ ದೂರು ನೀಡಿದ್ದು, ಘಟನೆ ನಡೆದ ದಿನದಂದು ಸ್ವತಃ ಆರೋಪಿ ವೆಂಕಟೇಶ್, ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ತಮ್ಮ ಮಗಳು ತಲೆಸುತ್ತಿ ಬಿದ್ದಿದ್ದಾಳೆ. ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ನೀವೂ ಬರಬೇಕೆಂದು ಹೇಳಿದ್ದಾನೆ.ಇದರಿಂದ ಗಾಬರಿಗೊಂಡು ಆಸ್ಪತ್ರೆಗೆ ತೆರೆಳಿದಾಗ ಆಕೆಯ ಕಾಲುಗಳ ಬಳಿ ರಕ್ತಸ್ರಾವ ಕಂಡುಬಂದಿದೆ. ಅಷ್ಟೇ ಅಲ್ಲದೆ, ಆಕೆಯ ಮೇಲೆ ಹಲ್ಲೆ ನಡೆಸಿರುವ ಗುರುತುಗಳು ಇದ್ದವು ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ತಮ್ಮ ಮಗಳನ್ನು ವೆಂಕಟೇಶ್ ಸಂಪರ್ಕಿಸಿ ಪ್ರೀತಿಸುತ್ತಿದ್ದೇನೆ ಎಂದು ಕತೆಕಟ್ಟಿದ್ದ. ಆದರೆ, ಇದೆಲ್ಲವೂ ಬೇಡ, ಓದಿನ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದೇವು.ಜತೆಗೆ, ಮಗಳಿಗೆ ಮೊಬೈಲ್ ನೀಡುವುದನ್ನು ನಿಲ್ಲಿಸಿದ್ದೇವು.ಆದರೂ, ಆಕೆಯನ್ನು ಸಂಪರ್ಕಿಸಿ ಬಲವಂತವಾಗಿ ಕರೆದೊಯ್ದು ಈ ಕೃತ್ಯವೆಸಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಂಡು ಆರೋಪಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಯುವತಿಯ ತಂದೆ ಮನವಿ ಮಾಡಿದರು.
ಇದನ್ನೂ ಓದಿ: ಬಳ್ಳಾರಿ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: 23 ವರ್ಷದ ತ್ರಿವೇಣಿ ರಾಜ್ಯದ ಅತಿ ಕಿರಿಯ ಮೇಯರ್