ಮಂಗಳೂರು: ವಿಚಾರವಾದಿ ನರೇಂದ್ರ ನಾಯಕ್ಗೆ ನೀಡುತ್ತಿದ್ದ ಪೊಲೀಸ್ ‘ಭದ್ರತೆ’ ವಾಪಸ್

ಮಂಗಳೂರು: ನಗರದ ಎಂಜಿ ರಸ್ತೆಯ ನಿವಾಸಿ, ಹಿರಿಯ ವಿಚಾರವಾದಿ, ಸಾಮಾಜಿಕ ಹೋರಾಟಗಾರ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ಗೆ ಕಳೆದ ಏಳು ವರ್ಷದಿಂದ ಪೊಲೀಸ್ ಇಲಾಖೆಯ ವತಿಯಿಂದ ನೀಡಲಾಗುತ್ತಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದ ನರೇಂದ್ರ ನಾಯಕ್ಗೆ ಬೆದರಿಕೆ ಕರೆಗಳು ಬರತೊಡಗಿದ ಬಳಿಕ ಮುನ್ನೆಚ್ಚರಿಕೆಯ ಕ್ರಮವಾಗಿ ಚಂದ್ರಶೇಖರ್ ನಗರ ಪೊಲೀಸ್ ಆಯುಕ್ತರಾಗಿದ್ದಾಗ ಇಬ್ಬರು ಅಂಗರಕ್ಷಕರ ಮೂಲಕ ‘ಭದ್ರತೆ’ ಒದಗಿಸಿದ್ದರು. ಹಗಲು-ರಾತ್ರಿ ಪಾಳಿಯಲ್ಲಿ ರಕ್ಷಣೆ ನೀಡುತ್ತಿದ್ದ ಈ ಇಬ್ಬರು ಪೊಲೀಸರು ಬುಧವಾರ ರಾತ್ರಿಯಿಂದ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಆ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳು ಸಕಾರಣ ನೀಡದೆ ಅಂಗರಕ್ಷಕರನ್ನು ವಾಪಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಸಲುವಾಗಿ ನರೇಂದ್ರ ನಾಯಕ್ ನಿರತಂತರವಾಗಿ ಪವಾಡಗಳ ರಹಸ್ಯವನ್ನು ಬಯಲು ಮಾಡುವ ಮೂಲಕ ಗಮನ ಸೆಳೆದಿದ್ದರು. ಜನಪರ, ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ನರೇಂದ್ರ ನಾಯಕ್ ಬಲಪಂಥೀಯರ ಕೆಂಗಣ್ಣಿಗೂ ಗುರಿಯಾಗಿದ್ದರು.
ಗುಪ್ತಚರ ವಿಭಾಗದ ವರದಿಯನ್ನು ಆಧರಿಸಿ 2016ರ ಜೂನ್ನಿಂದ ನರೇಂದ್ರ ನಾಯಕ್ ಪೊಲೀಸ್ ರಕ್ಷಣೆ ಪಡೆಯುತ್ತಿದ್ದರು. 2023ರ ಮಾ.29ರ ಸಂಜೆಯವರೆಗೂ ಒಬ್ಬ ಅಂಗರಕ್ಷಕ ಕರ್ತವ್ಯದಲ್ಲಿದ್ದರು. ಆದರೆ ರಾತ್ರಿಯ ವೇಳೆಗೆ ಅಂಗರಕ್ಷಕರು ಕಾಣಿಸಲಿಲ್ಲ ಎಂದು ತಿಳಿದು ಬಂದಿದೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಅಂಶುಕುಮಾರ್ ಅವರು ನರೇಂದ್ರ ನಾಯಕ್ಗೆ ಮಾ.4ರಂದು ಪತ್ರ ಬರೆದು ಭದ್ರತಾ ಸಿಬ್ಬಂದಿ (ಅಂಗರಕ್ಷಕ)ಯ ಮುಂಗಡ ಶುಲ್ಕವನ್ನು ಪಾವತಿಸಲು ಸೂಚಿಸಿದ್ದರು. ಈ ಬಗ್ಗೆ ಚರ್ಚಿಸಲು ಮಾ.6ರಿಂದ 10ರೊಳಗೆ ಕಚೇರಿ ಸಮಯ ತನ್ನನ್ನು ಭೇಟಿ ಮಾಡಲು ತಿಳಿಸಿದ್ದರು. ಅದರಂತೆ ನರೇಂದ್ರ ನಾಯಕ್ ಮಾ.7ರಂದು ಡಿಸಿಪಿ ಅಂಶುಕುಮಾರ್ರನ್ನು ಭೇಟಿ ಮಾಡಿ ‘ಮುಂಗಡ ಶುಲ್ಕ ಪಾವತಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ಆ ಬಳಿಕದ ಬೆಳವಣಿಗೆಯಂತೆ ಮಾ.29ರ ರಾತ್ರಿಯಿಂದ ನರೇಂದ್ರ ನಾಯಕ್ಗೆ ನೀಡಲಾದ ಅಂಗರಕ್ಷಕರನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ನರೇಂದ್ರ ನಾಯಕ್ ‘ನಾನೊಬ್ಬ ಸಾಮಾಜಿಕ ಹೋರಾಟಗಾರ, ವಿಚಾರವಾದಿ. ಅನೇಕ ಜನಪರ ಸಂಘಟನೆಗಳ ಹೋರಾಟದಲ್ಲಿ ಭಾಗಿಯಾಗುತ್ತಿದ್ದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದೆ. ಆ ಹಿನ್ನೆಲೆಯಲ್ಲಿ ನನ್ನ ಮೇಲೆ ಹಲ್ಲೆ, ಕೊಲೆಯತ್ನ ನಡೆದಿದೆ. ಆದರೆ ನಾನು ಯಾವತ್ತೂ ಕೂಡ ಪೊಲೀಸ್ ರಕ್ಷಣೆಯನ್ನು ಕೇಳಿರಲಿಲ್ಲ. 2016ರಲ್ಲಿ ಆಗಿನ ಪೊಲೀಸ್ ಕಮಿಷನರ್ ಚಂದ್ರಶೇಖರ್ ಭದ್ರತೆ ಒದಗಿಸಿದ್ದರು. ಮೊನ್ನೆ ಮುಂಗಡ ಶುಲ್ಕ ಭರಿಸಿ ಭದ್ರತೆ ಮುಂದುವರಿಸಲು ಸೂಚನೆ ಬಂದಿತ್ತು. ನಾನು ಉದ್ಯಮಿಯಲ್ಲ. ಹಾಗಾಗಿ ಶುಲ್ಕ ಭರಿಸಲು ಸಾಧ್ಯವಿಲ್ಲ ಅಂತ ಹೇಳಿದ್ದೆ. ನಿನ್ನೆ ರಾತ್ರಿಯಿಂದ ಭದ್ರತೆ ವಾಪಸ್ ಪಡೆಯಲಾಗಿದೆ. ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ’ ಎಂದು ತಿಳಿಸಿದ್ದಾರೆ.
ಐವರಿಗೆ ನೀಡಲಾಗಿದ್ದ ಭದ್ರತೆ ವಾಪಸ್: ಕಮಿಷನರ್
ಕಮಿಷನರೇಟ್ ವ್ಯಾಪ್ತಿಯಲ್ಲಿ ಐವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಆ ಪೈಕಿ ಒಬ್ಬರು ಭದ್ರತೆ ಬೇಡ ಎಂದು ಸ್ವತಃ ಹೇಳಿಕೆ ನೀಡಿದ್ದರು. ಉಳಿದಂತೆ ನಾಲ್ಕು ಮಂದಿಗೆ ನೀಡಲಾಗಿದ್ದ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಪೊಲೀಸ್ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ ಎಂದು ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಅನಾಹುತಗಳಿಗೆ ಪೊಲೀಸ್ ಇಲಾಖೆ, ಸರಕಾರ ನೇರ ಹೊಣೆ: ಡಿವೈಎಫ್ಐ
ಪ್ರೊ.ನರೇಂದ್ರ ನಾಯಕ್ಗೆ ನೀಡಲಾಗುತ್ತಿದ್ದ ಅಂಗರಕ್ಷಕ ಭದ್ರತೆಯನ್ನು ಪೊಲೀಸ್ ಇಲಾಖೆಯು ರದ್ದುಗೊಳಿಸಿರುವುದನ್ನು ಖಂಡಿಸಿರುವ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರೊ.ನರೇಂದ್ರ ನಾಯಕ್ ಅವರ ಜೀವಕ್ಕೆ ತೊಂದರೆಯಾಗುವಂತಹ ಅನಾಹುತಗಳಿಗೆ ಪೊಲೀಸ್ ಇಲಾಖೆ, ಸರಕಾರವೇ ನೇರ ಹೊಣೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಚಾರವಾದಿ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು, ಹೋರಾಟಗಾರರನ್ನು ಗುಂಡಿಕ್ಕಿ ಸಾಯಿಸಿದ ಘಟನೆಗಳು ನಡೆದಿರುವಾಗಲೇ ನರೇಂದ್ರ ನಾಯಕರಂತಹವರ ಹೆಸರು ಕೊಲೆಗಟುಕರ ಹಿಟ್ಲಿಸ್ಟ್ನಲ್ಲಿ ಇತ್ತೆಂದು ಗುಪ್ತಚರ ಇಲಾಖೆಗೆ ಮಾಹಿತಿಗಳು ಒದಗಿಸಿದ್ದವು. ನರೇಂದ್ರ ನಾಯಕರಿಗೂ ಕೊಲೆ ಬೆದರಿಕೆ ಇದ್ದುದರಿಂದ ಪೊಲೀಸ್ ಇಲಾಖೆಯು ಯಾವುದೇ ಷರತ್ತುಗಳಿಲ್ಲದೆ ಅಂಗರಕ್ಷಕ ಭದ್ರತೆಯನ್ನು ಒದಗಿಸಿತ್ತು. 2016ರಲ್ಲಿ ಕೊಲೆಯಾದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ಬಲಿಪಡೆದ ಸೂತ್ರದಾರರ ಬಂಧನಕ್ಕೆ ಆಗ್ರಹಿಸಿ ನಡೆಸಲಾದ ನಾನಾ ಹೋರಾಟಗಳ ನೇತೃತ್ವ ವಹಿಸಿದ್ದ ನರೇಂದ್ರ ನಾಯಕ್ಗೆ ನಿರಂತರ ಜೀವ ಬೆದರಿಕೆ ಒಡ್ಡುವ, ವಾಹನಗಳಿಗೆ ಹಾನಿ ಮಾಡುವಂತಹ ಪ್ರಯತ್ನಗಳು ನಡೆದಿವೆ. ನ್ಯಾಯಾಲಯದಲ್ಲಿ ವಿನಾಯಕ ಬಾಳಿಗೆ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಪೊಲೀಸ್ ಇಲಾಖೆಯು ಭದ್ರತೆಯನ್ನು ವಾಪಸ್ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣ ಪೊಲೀಸ್ ಇಲಾಖೆಯು ಯಾವುದೇ ಷರತ್ತುಗಳಿಲ್ಲದೆ ಈ ಹಿಂದಿನಂತೆ ಅಂಗರಕ್ಷಕ ಭದ್ರತೆಯನ್ನು ಒದಗಿಸಿಕೊಡಬೇಕು ಎಂದು ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.