ಶಸ್ತ್ರಾಸ್ತ್ರ ಠೇವಣಿ ಇಡಲು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯು ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು, ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ಆಯುಧಗಳನ್ನು ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಜಿಲ್ಲೆಯ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವವರು ತಮ್ಮ ಶಸ್ತ್ರಾಸ್ತಗಳನ್ನು ಎ.24ರೊಳಗೆ ಜಿಲ್ಲೆಯ ಅಧಿಕೃತ ಕೋವಿ, ಮದ್ದುಗುಂಡು ವ್ಯಾಪಾರಸ್ಥರಲ್ಲಿ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ಬೆಳೆ ರಕ್ಷಣೆಗಾಗಿ ಆಯುಧವು ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ ಪೂರಕ ದಾಖಲೆಗಳೊಂದಿಗೆ ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಆತ್ಮರಕ್ಷಣೆಗಾಗಿ ಪಡೆದ ಆಯುಧಗಳನ್ನು ಎ.24ರೊಳಗೆ ಠೇವಣಿ ಇಡಬೇಕು. ಸ್ವರಕ್ಷಣೆಗೆ ಆಯುಧ ಆವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವಾರದೊಳಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಹವಾಲು ಸಲ್ಲಿಸಬಹುದು.
ಜಿಲ್ಲೆಯ ಎಲ್ಲಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರು ಹಾಗೂ ಪೊಲೀಸ್ ಠಾಣೆಗಳಲ್ಲಿ ಪ್ರತೀ ಆಯುಧಗಳಿಗೆ ಮಾಸಿಕ 200 ರೂ.ನಂತೆ ಹಾಗೂ ಮದ್ದುಗುಂಡುಗಳಿಗೆ 100 ರೂ.ನಂತೆ ಆಯುಧ ಪರವಾನಿಗೆದಾರರಿಂದ ಪಡೆದು ಸರಕಾರಕ್ಕೆ ಜಮೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.