ಉಡುಪಿ: ಬ್ಲೇಡ್‌ನಿಂದ ಇರಿದು ಯುವಕನ ಕೊಲೆಗೆ ಯತ್ನ; ಇಬ್ಬರು ವಶಕ್ಕೆ
ಉಡುಪಿ, ಮಾ.30: ಕ್ಷುಲ್ಲಕ ಕಾರಣಕ್ಕಾಗಿ ಗಾಂಜಾ ನಶೆಯಲ್ಲಿದ್ದ ನಾಲ್ವರು ಯುವಕರ ತಂಡ ವ್ಯಕ್ತಿಯೊಬ್ಬರಿಗೆ ಲೇಸರ್ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಾ.30ರಂದು ನಸುಕಿನ ವೇಳೆ ಆದಿಉಡುಪಿ ಎಪಿಎಂಸಿ ಮಾರ್ಕೆಟ್ ಹಿಂಬದಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಆದಿಉಡುಪಿಯ ಪ್ರಶಾಂತ (27) ಹಾಗೂ ಹಲ್ಲೆ ನಡೆಸುವ ವೇಳೆ ಗಾಯಗೊಂಡಿದ್ದ ಆರೋಪಿಗಳಾದ ಪ್ರಶಾಂತ್ ಮತ್ತು ಸಂತೋಷ್ ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಆದಿಉಡುಪಿ ಸಂತೆ ಮಾರ್ಕೆಟ್ ಹಿಂಬದಿ ಅನುಮಾನಾಸ್ಪದವಾಗಿ ನಿಂತಿದ್ದ ನಾಲ್ವರು ಯುವಕರನ್ನು ಪ್ರಶಾಂತ್ ಪ್ರಶ್ನೆ ಮಾಡಿದ್ದನು. ಈ ಸಂದರ್ಭ ಇವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಿಟ್ಟಿನಲ್ಲಿ ಆರೋಪಿಗಳು ಪ್ರಶಾಂತ್ ಮನೆಯ ಕಿಟಕಿ ಗಾಜು ಒಡೆದು, ಬಾಗಿಲು ಮುರಿದು ಒಳ ನುಗ್ಗಿ ಪ್ರಶಾಂತ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಕ್ಷೌರಿಕರು ಉಪಯೋಗಿಸುವ ಲೇಸರ್ ಬ್ಲೇಡ್‌ನಿಂದ ಎದೆ ಹಾಗೂ ಹೊಟ್ಟೆಗೆ ಇರಿದರೆಂದು ದೂರಲಾಗಿದೆ.
ಇದರ ಪರಿಣಾಮ ಪ್ರಶಾಂತ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ಈ ವೇಳೆ ಸೇರಿದ ಸ್ಥಳೀಯರು ಆರೋಪಿಗಳ ಪೈಕಿ ಪ್ರಶಾಂತ್ ಮತ್ತು ಸಂತೋಷ ಎಂಬವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.